ತಾನು ನೀಡಿದ ತ್ರಿವಳಿ ತಲಾಕ್ ಒಪ್ಪದ ಹೆಂಡತಿಯನ್ನು ಕೊಲೆ ಆರೋಪದಡಿ ಸಿಕ್ಕಿಸಲು, ಇಲ್ಲೊಬ್ಬ ಕ್ರೂರಿ ತಂದೆ ತನ್ನ ಏಳು ವರ್ಷದ ಮಗಳನ್ನು ಕೊಲೆ ಮಾಡಿಸಿದ್ದಾನೆ. ಆರೋಪಿ ಮತ್ತು ಸಹಚರರು ಈಗ ಬಂಧಿಯಾಗಿದ್ದಾರೆ.
ಕೊಲೆಯಾದ ಬಾಲಕಿ ಸಬಾ, ಉತ್ತರಪ್ರದೇಶದ ಬುಲಂದರ್ ಶೆಹರ್ ನಿವಾಸಿಯಾಗಿದ್ದು, ಈಕೆಯ ತಂದೆ ಮುಜಾಮಿಲ್ ಶಮ್ಮಾದ್ ದೆಹಲಿಯಲ್ಲಿ ಕ್ಯಾಬ್ ಸರ್ವಿಸ್ ನಡೆಸುತ್ತಿದ್ದಾನೆ. ಸದ್ಯಕ್ಕೆ ಪೊಲೀಸರು, ಇವನೊಂದಿಗೆ ಆತನ ಸೋದರ ಸಂಬಂಧಿ ಮುದ್ದಾಸಿರ್ ಶಮ್ಮಾದ್ ಮತ್ತು ನೆರೆಯವನನ್ನೂ ಸಹ ಬಂಧಿಸಿದ್ದಾರೆ.
ಮಗುವಿನ ತಾಯಿ ಶಬ್ನಮ್ ದೂರಿನ ಅನ್ವಯ, ಶಮ್ಮಾದ್ ಈಕೆಯನ್ನು 2010ರಲ್ಲಿ ಮದುವೆಯಾಗಿದ್ದು ಈಕೆಯ ಅನುಪಸ್ಥಿತಿಯಲ್ಲಿ 2014ರಲ್ಲಿ ತಲಾಕ್ ನೀಡಿದ್ದಾನೆ ಎನ್ನಲಾಗಿದೆ. ಹಾಗಾಗಿ ಅದು ಅಮಾನ್ಯವಾಗಿದೆ. ಅಲ್ಲದೆ ಅವನು ಇನ್ನೊಂದು ಮದುವೆಯಾಗಿದ್ದು, 2018 ರಲ್ಲಿ ಈಕೆಯ ಮೇಲೆ ಆಸಿಡ್ ದಾಳಿಗೂ ಪ್ರಯತ್ನಿಸಿದ್ದಾನೆ. ಈಗ ಪೊಲೀಸರು ಈತನನ್ನು ಮತ್ತು ಅವನ ಸಹಚರರನ್ನು ಕೊಲೆ ಆರೋಪದಡಿ ಬಂಧಿಸಿದ್ದಾರೆ.
ಕೊಲೆಯಾದ ದಿನ, ಶಮ್ಮಾದ್ ಯಾರಿಗೂ ಅನುಮಾನ ಬರಬಾರದೆಂದು ದೆಹಲಿಯಲ್ಲಿ ತಂಗಿದ್ದಾನೆ. ಅವನಿಗೆ ಸಾಥ್ ಕೊಟ್ಟ ಮತ್ತಿಬ್ಬರು, ಹೆಂಡತಿಯ ಮನೆಯ ಹಿಂಬಾಗಿಲಿನಿಂದ ಬಂದು ಬಾಲಕಿಯನ್ನು ಕೊಲೆಗೈದಿದ್ದಾರೆ. ಶಮ್ಮಾದ್ ಇದಕ್ಕಾಗಿ ಎಂಟು ಸಾವಿರ ಮತ್ತು ಮದ್ಯ ನೀಡಿದ್ದಾನೆ.
ಇವರ ಮಗನು ಎರಡು ವರ್ಷದ ಹಿಂದೆ ನಿಗೂಢವಾಗಿ ಸಾವನಪ್ಪಿದ ಎನ್ನಲಾಗಿದೆ. ಉತ್ತರ ಪ್ರದೇಶದಲ್ಲಿ ಇದು ಎರಡನೇ ಘಟನೆಯಾಗಿದ್ದು, ಝಾನ್ಸಿಯಲ್ಲಿ ಕೂಡ ತಂದೆಯೊಬ್ಬ ತನ್ನ ಅಪ್ರಾಪ್ತ ಮಗಳನ್ನು ಕೊಂದಿದ್ದಾನೆ.