ಯೆಮೆನ್‌ನ ಪೂರ್ವ ಪ್ರಾಂತ್ಯದ ಅಲ್-ಮಹ್ರಾದ ಮರುಭೂಮಿ ನೆಲದಲ್ಲಿ ಸಂಶೋಧಕರು 367 ಅಡಿಗಳ ಕೆಳಭಾಗದಲ್ಲಿ ಹಾವಿನ ಗುಂಡಿಯನ್ನು ಶೋಧಿಸಿದ್ದಾರೆ. ಇದನ್ನು ನರಕದ ಬಾವಿ ಎಂದು ಕೂಡ ಕರೆಯುತ್ತಾರೆ.
ಓಮನ್ ಗುಹೆ ಪರಿಶೋಧನಾ ತಂಡವು (ಒಸಿಇಟಿ) ಹಾವುಗಳು, ಸತ್ತ ಪ್ರಾಣಿಗಳು ಮತ್ತು ಗುಹೆ ಮುತ್ತುಗಳನ್ನು ಕಂಡುಕೊಂಡಿದೆ. ಆದರೆ, ಇಲ್ಲಿ ಯಾವುದೇ ಅಲೌಕಿಕ ಲಕ್ಷಣಗಳಿರಲಿಲ್ಲ ಎಂದು ಹೇಳಿದೆ.
ಜನರ ನಂಬಿಕೆ ಪ್ರಕಾರ, ಇದನ್ನು ನರಕದ ದ್ವಾರ ಎಂದೇ ಪರಿಗಣಿಸಿದ್ದಾರೆ. ಇಲ್ಲಿಂದ ಕೆಟ್ಟ ವಾಸನೆ ಹೊರಹೊಮ್ಮುವುದರಿಂದ ಜನರು ಈ ಬಗ್ಗೆ ಮತ್ತಷ್ಟು ಭೀತಿ ವ್ಯಕ್ತಪಡಿಸುತ್ತಾರೆ. ಶತಶತಮಾನಗಳಿಂದಲೂ ಇದಕ್ಕೆ ಹಲವಾರು ಕಥೆಗಳಿದ್ದು, ಜನರು ಇತ್ತ ಕಡೆ ಸುಳಿಯುವುದೇ ಇಲ್ಲ.
ಇನ್ನು ಗುಹೆಯಲ್ಲಿ ಶೋಧಿಸಿದ ತಂಡವು ಹಲವು ವಿಚಾರಗಳನ್ನು ಹೇಳಿವೆ. “ಹಾವುಗಳು ಇದ್ದವು, ಆದರೆ ನೀವು ಅವುಗಳಿಗೆ ತೊಂದರೆಗೊಳಿಸದ ಹೊರತು ಅವು ನಿಮಗೆ ತೊಂದರೆ ಕೊಡುವುದಿಲ್ಲ” ಎಂದು ಒಮಾನ್‌ನ ಜರ್ಮನ್ ತಂತ್ರಜ್ಞಾನ ವಿಶ್ವವಿದ್ಯಾಲಯದ ಭೂವಿಜ್ಞಾನ ಪ್ರಾಧ್ಯಾಪಕ ಮೊಹಮ್ಮದ್ ಅಲ್-ಕಿಂಡಿ ಹೇಳಿದ್ದಾರೆ.
ಇನ್ನು ಈ ಗುಹೆ ರಚನೆಯು ಬೂದು ಮತ್ತು ಸುಣ್ಣ-ಹಸಿರು ಬಣ್ಣದಿಂದ ಕೂಡಿವೆ. ಗುಹೆ ಮುತ್ತುಗಳು, ತೊಟ್ಟಿಕ್ಕುವ ನೀರಿನಿಂದ ಈ ಗುಹೆ ರೂಪುಗೊಂಡಿವೆ. “ನಾವು ನೀರು, ಬಂಡೆಗಳು, ಮಣ್ಣು ಮತ್ತು ಕೆಲವು ಸತ್ತ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಿದ್ದೇವೆ. ಆದರೆ ಅವುಗಳನ್ನು ಇನ್ನೂ ವಿಶ್ಲೇಷಿಸಿಲ್ಲ. ವರದಿಯನ್ನು ಶೀಘ್ರದಲ್ಲೇ ಸಾರ್ವಜನಿಕಗೊಳಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಗುಹೆಯಲ್ಲಿ ಸತ್ತ ಹಕ್ಕಿಗಳು ಇದ್ದವು, ಅದು ಕೆಲವು ಕೆಟ್ಟ ವಾಸನೆಯನ್ನು ಉಂಟುಮಾಡುತ್ತದೆ. ಆದರೆ, ಯಾವುದೇ ಅತಿಯಾದ ಕೆಟ್ಟ ವಾಸನೆ ಇರಲಿಲ್ಲ ಎಂದು ಸಂಶೋಧನಾ ತಂಡ ಸ್ಪಷ್ಟಪಡಿಸಿದೆ.