ನವದೆಹಲಿ: ಭಾರತದಲ್ಲಿ ಕಳೆದ ಆರು ತಿಂಗಳಿನಲ್ಲೇ ಮೊದಲ ಬಾರಿಗೆ ಕೋವಿಡ್ -19 ಸೋಂಕುಗಳ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕುಸಿದಿದ್ದು, ಮೂರು ಲಕ್ಷಕ್ಕಿಂತ ಕಡಿಮೆ ಪ್ರಕರಣ (2,94,497) ವರದಿಯಾಗಿದೆ. ಮೇ ತಿಂಗಳಲ್ಲಿ ಎರಡನೇ ತರಂಗದ ವೇಳೆ ಈ ಸಂಖ್ಯೆ 37.45 ಲಕ್ಷಕ್ಕೆ ಏರಿಕೆಯಾಗಿತ್ತು.
ಮೇ ಮಧ್ಯದಿಂದ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಕುಸಿಯುತ್ತಿದೆ. ಆದರೆ ಕೇರಳ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿದೆ. ದೇಶದ ಎಲ್ಲಾ ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 55 ರಷ್ಟು ಅಂದರೆ 1.63 ಲಕ್ಷಕ್ಕಿಂತ ಹೆಚ್ಚು ಪ್ರಕರಣಗಳು ಇದೀಗ ಕೇರಳದಲ್ಲಿದೆ. ಕೇರಳದ ನಂತರ, ಮಹಾರಾಷ್ಟ್ರವು ಅತಿ ಹೆಚ್ಚು ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಸುಮಾರು 37,000 ಕೊರೋನಾ ಸಕ್ರಿಯ ಪ್ರಕರಣಗಳು ಮಹಾರಾಷ್ಟ್ರದಲ್ಲಿದೆ.
ಭಾನುವಾರ ದೇಶದಾದ್ಯಂತ 26,041 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 15,951 ಕೇರಳದಲ್ಲೇ ಪತ್ತೆಯಾಗಿದೆ. ಮಹಾರಾಷ್ಟ್ರದಲ್ಲಿ 3,200 ಪ್ರಕರಣಗಳು ಪತ್ತೆಯಾಗಿದೆ.
ಈ ಮಧ್ಯೆ ಮಿಜೋರಾಂನಲ್ಲಿ ಕೊರೋನಾ ಉಲ್ಬಣ ಕಾಣುತ್ತಿದೆ. ಕೇವಲ 12 ಲಕ್ಷ ಜನಸಂಖ್ಯೆ ಹೊಂದಿರುವ ರಾಜ್ಯವಾದ ಮಿಜೋರಾಂ, ಒಂದು ವಾರದಿಂದ ಅಗ್ರ ಐದರ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಕೊರೋನಾ ಸರಾಸರಿ 1,500 ಪ್ರಕರಣಗಳನ್ನು ವರದಿ ಮಾಡಿದೆ. ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು (17,285) ನಂತರ ಮಿಜೋರಾಂನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಸುಮಾರು 16,000 ಕ್ಕೆ ಏರಿದೆ.