ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸೂಪರ್ ಸ್ಪೆಷಾಲಿಟಿ(ನೀಟ್-ಎಸ್ಎಸ್) ಪರೀಕ್ಷೆ 2021 ಕ್ಕೆ ರಾಷ್ಟ್ರೀಯ ಪರೀಕ್ಷಾ ಮಂಡಳಿ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗದ ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ್ದನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
41 ಪಿಜಿ ವೈದ್ಯರು ತಮ್ಮ ಪಠ್ಯಕ್ರಮದಲ್ಲಿನ ‘ಕೊನೆಯ ನಿಮಿಷ’(last minute) ಮತ್ತು “ಹಠಾತ್” ಬದಲಾವಣೆಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಪರಿಗಣಿಸಿ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ಪೀಠ ಮುಂದಿನ ವರ್ಷ ಬದಲಾವಣೆಗಳನ್ನು ಏಕೆ ಜಾರಿಗೊಳಿಸಲಾಗುವುದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದೆ.
ವಿದ್ಯಾರ್ಥಿಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್ಗಳಿಗೆ ತಿಂಗಳು ಮುಂಚಿತವಾಗಿ ತಯಾರಿ ಆರಂಭಿಸುತ್ತಾರೆ. ಪರೀಕ್ಷೆಗೆ ಮುಂಚೆ ಕೊನೆಯ ನಿಮಿಷ ಬದಲಾಯಿಸುವ ಅಗತ್ಯ ಏಕೆ? ಮುಂದಿನ ವರ್ಷದಿಂದ ಬದಲಾವಣೆಗಳೊಂದಿಗೆ ಮುಂದುವರಿಯಲು ಏಕೆ ಸಾಧ್ಯವಿಲ್ಲ? ನ್ಯಾ.ಚಂದ್ರಚೂಡ್ ಅವರು ರಾಷ್ಟ್ರೀಯ ಪರೀಕ್ಷಾ ಮಂಡಳಿಯನ್ನು ಪ್ರತಿನಿಧಿಸುತ್ತಿದ್ದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರನ್ನು ಕೇಳಿದ್ದಾರೆ.
ನ್ಯಾಯಮೂರ್ತಿ ಚಂದ್ರಚೂಡ್ ಅವರು, ಈ ಯುವ ವೈದ್ಯರನ್ನು ಅಧಿಕಾರದ ಆಟದಲ್ಲಿ ಫುಟ್ಬಾಲ್ಗಳಂತೆ ಪರಿಗಣಿಸಬೇಡಿ. ಸಭೆಯನ್ನು ನಡೆಸಿ ಮತ್ತು ಕ್ರಮ ಕೈಗೊಳ್ಳಿ. ನಾವು ಈ ವೈದ್ಯರನ್ನು ಸೂಕ್ಷ್ಮವಿಲ್ಲದ ಅಧಿಕಾರಶಾಹಿಗಳ ಕರುಣೆಗೆ ಒಳಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
NBE ಮತ್ತು NMC ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಲು ಮತ್ತು ಅಗತ್ಯವಾದ ಸೂಕ್ತ ಕ್ರಮ ಕೈಗೊಳ್ಳಲು ಪೀಠವು ತಿಳಿಸಿದೆ.
ಇದು ಅವರ ವೃತ್ತಿಜೀವನಕ್ಕೆ ಬಹಳ ಮುಖ್ಯವಾಗಿದೆ. ಈಗ ನೀವು ಕೊನೆಯ ಕ್ಷಣದಲ್ಲಿ ಬದಲಾವಣೆಗಳನ್ನು ಪರಿಚಯಿಸಲು ಸಾಧ್ಯವಿಲ್ಲ ಎಂದು ನ್ಯಾ. ಚಂದ್ರಚೂಡ್ ಪುನರುಚ್ಚರಿಸಿದ್ದಾರೆ.