ಕ್ರಿಕೆಟ್ ಅಭಿಮಾನಿಗಳು ಟಿ 20 ವಿಶ್ವಕಪ್ ಗೆ ಕಾಯ್ತಿದ್ದಾರೆ. ಐಪಿಎಲ್ ನಂತ್ರ ನಡೆಯುವ ಟಿ-20 ವಿಶ್ವಕಪ್ ಗೆ ಇನ್ನು ಕೆಲವೇ ದಿನ ಉಳಿದಿದೆ. ಅಕ್ಟೋಬರ್ 17ರಿಂದ ನಡೆಯುವ ಟಿ-20 ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾಕ್ಕೆ ಕೆಟ್ಟ ಸುದ್ದಿ ಇದೆ.
ಟಿ 20 ವಿಶ್ವಕಪ್ನಲ್ಲಿ ಹಾರ್ದಿಕ್ ಪಾಂಡ್ಯ ಭಾರತದ ಅತಿದೊಡ್ಡ ಮ್ಯಾಚ್ ವಿನ್ನರ್ ಆಗ್ತಾರೆ ಎಂಬ ವಿಶ್ವಾಸವಿತ್ತು. ಆದ್ರೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಹಾಗೂ ಫಾರ್ಮ್ ಬಗ್ಗೆ ಅನುಮಾನ ಮೂಡಿದೆ. ಕೊರೊನಾದ ನಂತರ ಯುಎಇಯಲ್ಲಿ ಐಪಿಎಲ್ ಪುನರಾರಂಭವಾದ ನಂತ್ರ, ಹಾರ್ದಿಕ್ ಪಾಂಡ್ಯ ಸತತ ಎರಡು ಪಂದ್ಯಗಳಲ್ಲಿ ಮುಂಬೈ ಪರ ಆಡಲಿಲ್ಲ. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಗೆ ಅವಕಾಶ ಸಿಕ್ಕಿತ್ತು. ಆದರೆ ಅವರು ಬೌಲಿಂಗ್ ಮಾಡಲಿಲ್ಲ. ಬ್ಯಾಟಿಂಗ್ ನಲ್ಲೂ ಫ್ಲಾಪ್ ಆಗಿದ್ದು, ಕೇವಲ 3 ರನ್ ಗಳಿಸಿದ್ದಾರೆ.
ಐಪಿಎಲ್ 2021 ರ ಉಳಿದ ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲು ಅರ್ಹರೇ ಎಂಬುದು ಖಚಿತವಾಗಿಲ್ಲ. ಹಾರ್ದಿಕ್ ಪಾಂಡ್ಯ ದೀರ್ಘಕಾಲದಿಂದ ಬೌಲಿಂಗ್ ಮಾಡುತ್ತಿಲ್ಲ. ಹಾರ್ದಿಕ್ ಪಾಂಡ್ಯ ಕೆಳ ಬೆನ್ನಿನ ಗಾಯದಿಂದ ಚೇತರಿಸಿಕೊಂಡಿದ್ದಾರೆ. ಆದ್ರೆ ಮೈದಾನದಲ್ಲಿ ಫಿಟ್ನೆಸ್ ಸಾಭೀತುಪಡಿಸುವ ಅವಶ್ಯಕತೆಯಿದೆ. ಈಗಾಗಲೇ ಭಾರತೀಯ ಆಯ್ಕೆಗಾರರು ಹಾರ್ದಿಕ್ ಪಾಂಡ್ಯರನ್ನು ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ಆದ್ರೆ ಪಾಂಡ್ಯ ನಂಬಿಕೆ ಉಳಿಸಿಕೊಳ್ತಾರಾ ಎಂಬ ಪ್ರಶ್ನೆ ಕಾಡಲು ಶುರುವಾಗಿದೆ.
ಹಾರ್ದಿಕ್ ಪಾಂಡ್ಯ ಬದಲು ಶಾರ್ದೂಲ್ ಠಾಕೂರ್ ಗೆ ಆಡಲು ಅವಕಾಶ ಸಿಗುವ ಸಾಧ್ಯತೆಯಿದೆ. ಶಾರ್ದೂಲ್ ಠಾಕೂರ್, ಪ್ರಸ್ತುತ ಫಾರ್ಮ್ ನಲ್ಲಿದ್ದಾರೆ. ಶಾರ್ದೂಲ್ ಠಾಕೂರ್ ಅವರನ್ನು ಐಸಿಸಿ ಟಿ 20 ವಿಶ್ವಕಪ್ 2021 ತಂಡದಲ್ಲಿ ಸ್ಟ್ಯಾಂಡ್ ಬೈ ಪ್ಲೇಯರ್ ಆಗಿ ಇರಿಸಿಕೊಳ್ಳಲಾಗಿದೆ.