ಪರೀಕ್ಷೆಯಲ್ಲಿ ಪಾಸಾಗಲು ಕೆಲವು ವಿದ್ಯಾರ್ಥಿಗಳು ಕಾಪಿ ಕುಡಿಯಲು ಮುಂದಾಗುವುದು ಸಾಮಾನ್ಯ ಸಂಗತಿ. ಇಂಥವರನ್ನು ಹಿಡಿಯಲೆಂದೇ ಶಿಕ್ಷಕರು ಪರೀಕ್ಷಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಾರೆ. ಆದರೆ ಈ ಪ್ರಕರಣದಲ್ಲಿ ಆಗಿರುವ ವಿಚಾರ ಮಾತ್ರ ಬೆಚ್ಚಿಬೀಳಿಸುವಂತಿದೆ.
ಹೌದು, ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ಮೂವರು ಭಾವಿ ಶಿಕ್ಷಕರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಾಪಿ ಹೊಡೆಯಲು ಮುಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ ಪರೀಕ್ಷಾ ಮೇಲ್ವಿಚಾರಕರ ಕಾರಣಕ್ಕೆ ಈ ಮೂವರು ಸಹ ಈಗ ಸಿಕ್ಕಿಬಿದ್ದಿದ್ದು ಕ್ರಮ ಎದುರಿಸುತ್ತಿದ್ದಾರೆ.
ಭಾನುವಾರದಂದು ನಡೆದ ರಾಜಸ್ಥಾನ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಹಾಜರಾಗಿದ್ದ ಈ ಮೂವರು ಅಭ್ಯರ್ಥಿಗಳು ತಮ್ಮ ಚಪ್ಪಲಿಯೊಳಗೆ ಬ್ಲೂಟೂತ್ ಸಾಧನವನ್ನು ಅಡಗಿಸಿಟ್ಟುಕೊಂಡಿದ್ದು, ಇದಕ್ಕೆ ಸಂಪರ್ಕ ಹೊಂದಿದ್ದ ಮೊಬೈಲ್ ಫೋನ್ ಗಳನ್ನು ಇಟ್ಟುಕೊಂಡು ಇವರುಗಳಿಗೆ ನೆರವಾಗಲು ಸ್ನೇಹಿತರು ಹೊರಗೆ ನಿಂತಿದ್ದರು. ಇದೀಗ ಎಲ್ಲರನ್ನೂ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.