ದೇಶದಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ವರ್ಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ನೀತಿಯೊಂದನ್ನು ತರಲಿದೆ ಎಂದು ಕೇಂದ್ರ ಸಹಕಾರ ಸಚಿವರೂ ಆಗಿರುವ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ರಾಷ್ಟ್ರೀಯ ಸಹಕಾರ ಸಮ್ಮೇಳನದಲ್ಲಿ ಮಾತನಾಡಿ, ಪ್ರಾಥಮಿಕ ಕೃಷಿ ಸಂಘಗಳ ಸಂಖ್ಯೆಯನ್ನು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಮೂರು ಲಕ್ಷಕ್ಕೆ ಏರಿಸಲಾಗುವುದು ಎಂದಿದ್ದಾರೆ ಅಮಿತ್ ಶಾ. ಸಹಕಾರ ಸಚಿವಾಯಕ್ಕೆ ಈ ವರ್ಷ ಜುಲೈನಿಂದ ಚಾಲನೆ ನೀಡಲಾಗಿದೆ. ಸದ್ಯದ ಮಟ್ಟಿಗೆ ದೇಶದಲ್ಲಿ 65,000 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿವೆ.
ವಿವಿಧ ಸಹಕಾರ ಸಂಘಗಳ 2,100ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಆನ್ಲೈನ್ ಮೂಲಕ ಆರು ಕೋಟಿಯಷ್ಟು ಮಂದಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಸಹಕಾರ ಚಳವಳಿಯನ್ನು ಮುಂದಕ್ಕೆ ಒಯ್ಯಲು ಎಲ್ಲಾ ರಾಜ್ಯಗಳೊಂದಿಗೆ ಕೆಲಸ ಮಾಡುತ್ತೇವೆ. ಕ್ಷೇತ್ರವನ್ನು ಆಧುನೀಕರಣಗೊಳಿಸಲು ಸಹಕಾರ ಸಚಿವಾಲಯಕ್ಕೆ ಚಾಲನೆ ನೀಡಲಾಗಿದೆ,” ಎಂದು ತಿಳಿಸಿದ್ದಾರೆ.
2002ರಲ್ಲಿ ಅಟಲ್ ಬಿಹಾರಿ ವಾಜಪೇಯ ಪ್ರಧಾನಿಯಾಗಿದ್ದಾಗ ತರಲಾದ ಸಹಕಾರ ಸಂಘದ ನೀತಿಯನ್ನು ಮೋದಿ ಸರ್ಕಾರ ಮುಂದೊಯ್ಯಲಿದ್ದು, 5 ಲಕ್ಷ ಕೋಟಿ ಡಾಲರ್‌ಗಳ ಆರ್ಥಿಕ ಶಕ್ತಿಯನ್ನಾಗಿ ಭಾರತವನ್ನು ಕಟ್ಟುವ ಯತ್ನಕ್ಕೊಂದು ಬಲ ತುಂಬಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.