ಅಮೆರಿಕ ನ್ಯೂ ಮೆಕ್ಸಿಕೋದಲ್ಲಿ ಇತ್ತೀಚಿಗೆ ಹೆಜ್ಜೆ ಗುರುತುಗಳ ಪಳೆಯುಳಿಕೆ ಪತ್ತೆಯಾಗಿದ್ದು ಇದರಿಂದಾಗಿ ಸರಿ ಸುಮಾರು 23 ಸಾವಿರ ವರ್ಷಗಳ ಹಿಂದೆಯಿಂದಲೂ ಉತ್ತರ ಅಮೆರಿಕ ಭಾಗದಲ್ಲಿ ಮಾನವರು ಇದ್ದರು ಎಂಬುದು ಸಾಬೀತಾಗಿದೆ.
ಬೌರ್ನ್ಮೌತ್ ವಿಶ್ವವಿದ್ಯಾಲಯವು ಮಾನವ ಅಸ್ತಿತ್ವದ ಕುರಿತಂತೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
ಇಲ್ಲಿಯವರೆಗೆ ಅಮೆರಿಕ ಖಂಡದಲ್ಲಿ 13 ಸಾವಿರದಿಂದ 16 ಸಾವಿರ ವರ್ಷಗಳ ಹಿಂದೆಯಿಂದ ಮಾನವರು ಇದ್ದರು ಎಂದು ತಿಳಿಯಲಾಗಿತ್ತು.
ಆದರೆ ಈ ಹೊಸ ಅನ್ವೇಷಣೆಯ ಬಳಿಕ ಅಮೆರಿಕದಲ್ಲಿ 23 ಸಾವಿರ ವರ್ಷಗಳ ಹಿಂದೆಯಿಂದಲೇ ಮಾನವರು ಇದ್ದರು ಎಂದು ಸೂಚಿಸುತ್ತಿದೆ. ಇದನ್ನು ಅಮೆರಿಕದ ಪ್ರಮುಖ ಪುರಾತತ್ವ ಸಾಧನೆ ಎಂದು ಪರಿಗಣಿಸಲಾಗಿದೆ.
ವರದಿಗಳ ಪ್ರಕಾರ, ಬ್ರಿಟನ್ ಹಾಗೂ ಅಮೆರಿಕ ಪುರಾತತ್ವತಜ್ಞರು ಅಲ್ಕಕಿ ಫ್ಲಾಟ್ ಹೆಸರಿನ ಸರೋವರದಲ್ಲಿ ಪತ್ತೆ ಮಾಡಲಾದ ಮಾನವ ಹೆಜ್ಜೆಗುರುತುಗಳನ್ನು ಆಧರಿಸಿ ಈ ಸಂಶೋಧನೆಯನ್ನು ಮಾಡಿದ್ದಾರೆ.
ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಮಾನವನ ಮಣ್ಣಿನ ಹೆಜ್ಜೆ ಗುರುತುಗಳು ಕಾಣಸಿಕ್ಕಿವೆ. ಅಮೆರಿಕದ ಜಿಯೋಲಾಜಿಕಲ್ ಸರ್ವೇ ತಜ್ಞರು ರೆಡಿಯೋ ಕಾರ್ಬನ್ ಡೇಟಿಂಗ್ ಸಹಾಯದಿಂದ ಸುಮಾರು 20 ಸಾವಿರ ವರ್ಷಗಳಲ್ಲಿ ಇಲ್ಲಿ ಹೆಜ್ಜೆ ಗುರುತು ರೂಪುಗೊಂಡಿರುವುದನ್ನು ಕಂಡುಹಿಡಿದಿದ್ದಾರೆ.