ನಾಗ್ಪುರವನ್ನು ಭಾರತದ ಹುಲಿಗಳ ರಾಜಧಾನಿ ಎಂದೇ ಕರೆಯಲಾಗುತ್ತದೆ. ಆದರೆ ಮಹಾರಾಷ್ಟ್ರದ ವಿದರ್ಭ ಪ್ರದೇಶದ ಐದು ಹುಲಿ ಯೋಜನೆಗಳಲ್ಲಿ ಇಲ್ಲಿ ರಾಷ್ಟ್ರೀಯ ಪ್ರಾಣಿ ಸುರಕ್ಷಿತವಾಗಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.
ಹೌದು..! ರಾಜ್ಯ ವನ್ಯಜೀವಿ ಇಲಾಖೆಯ ಪ್ರಕಾರ, 2018ರಿಂದ ಇಲ್ಲಿಯವರೆಗೆ 24 ಹುಲಿಗಳನ್ನು ಹಾಗೂ 57 ಚಿರತೆಗಳನ್ನು ಕೊಲೆ ಮಾಡಲಾಗಿದೆ. ಇವುಗಳಲ್ಲಿ ಹೆಚ್ಚಿನ ಸಾವುಗಳು ಬೇಟೆಯಾಡುವ ಉದ್ದೇಶದಿಂದ ನಡೆದಿದೆ.
ಆರ್ಟಿಐ ಕಾರ್ಯಕರ್ತ ಅಭಯ್ ಕೋಲಾರ್ಕರ್ ಮಹಾರಾಷ್ಟ್ರದ ವನ್ಯಜೀವಿ ವಿಭಾಗದ ಬಳಿ ಹುಲಿಗಳ ಸಾವಿನ ಬಗ್ಗೆ ವಿವರಣೆ ಕೇಳಿದ್ದರು. ಇದಕ್ಕೆ ಪ್ರತಿಯಾಗಿ ಮಾಹಿತಿ ನೀಡಿದ ಮಹಾರಾಷ್ಟ್ರ ವನ್ಯಜೀವಿ ವಿಭಾಗ 2018ರಿಂದ ರಾಜ್ಯದಲ್ಲಿ 24 ಹುಲಿಗಳಲ್ಲಿ 20 ಹಾಗೂ 57 ಚಿರತೆಗಳಲ್ಲಿ 45 ಚಿರತೆಗಳನ್ನು ಬೇಟೆಯಾಡಿದ್ದಾರೆ ಎಂದು ಹೇಳಿದೆ.
ಈ ಎಲ್ಲಾ ಹುಲಿ ಸಾವುಗಳು ವಿದರ್ಭ ಪ್ರದೇಶದಲ್ಲಿಯೇ ಹೆಚ್ಚಾಗಿ ಸಂಭವಿಸಿದೆ. ಮಹಾರಾಷ್ಟ್ರದಲ್ಲಿ ರಾಜ್ಯದ ಆರು ಹುಲಿ ಯೋಜನೆಗಳಲ್ಲಿ ಐದು ವಿದರ್ಭದಲ್ಲಿದೆ. ಮೆಲ್ಘಾಟ್(ಆಮರಾವತಿ), ತಡೋಬಾ( ಚಂದ್ರಪುರ). ಪೆಂಚ್(ನಾಗ್ಪುರ), ಬೋರ್(ವಾರ್ಧಾ) ಹಾಗೂ ನವೇಗಾಂವ್ – ನಾಗ್ಜೀರಾ(ಭಂಡಾರ) ವಿದರ್ಭದಲ್ಲಿರುವ ಹುಲಿ ಯೋಜನೆಯಾಗಿದೆ. ಇನ್ನೊಂದು ವಿದರ್ಭ ಪ್ರದೇಶದಿಂದ ಹೊರಗಿರುವ ಏಕೈಕ ಹುಲಿ ಯೋಜನೆ ಸಹ್ಯಾದ್ರಿಯಾಗಿದ್ದು ಇದು ಸತಾರಾ, ಸಾಂಗ್ಲಿ, ಕೊಲ್ಹಾಪುರ ಹಾಗೂ ರತ್ನಗಿರಿ ಜಿಲ್ಲೆಗಳಲ್ಲಿ ಹರಡಿದೆ.
ಆರ್ಟಿಐಗೆ ನೀಡಲಾದ ಮಾಹಿತಿಯ ಪ್ರಕಾರ ಜನವರಿ 2020ರಿಂದ 2021ರ ಸೆಪ್ಟೆಂಬರ್ 8ರ ಒಳಗಾಗಿ 24ರಲ್ಲಿ 15 ಹುಲಿಗಳು ಸಾವನ್ನಪ್ಪಿವೆ. ರಾಷ್ಟ್ರವ್ಯಾಪಿ ಲಾಕ್ಡೌನ್ ಜಾರಿಯಾದ ಬಳಿಕ ಬೇಟೆಯಾಡುವ ಪ್ರವೃತ್ತಿ ಇನ್ನಷ್ಟು ಜಾಸ್ತಿಯಾಯ್ತು ಅನ್ನೋದನ್ನು ಅಂದಾಜಿಸಬಹುದಾಗಿದೆ. ಚಂದ್ರಾಪುರ ಜಿಲ್ಲೆಯಲ್ಲಿಯೇ ಹೆಚ್ಚಾಗಿ ಹುಲಿಗಳನ್ನು ಬೇಟೆಯಾಡಲಾಗಿದೆ. ಇದು ಪ್ರಸಿದ್ಧ ತಡೋಬಾ ಹುಲಿ ಅಭಯಾರಣ್ಯದ ನೆಲೆಯಾಗಿದೆ.