ಬೆಂಗಳೂರು: ವಾರದ ಐದು ದಿನ 6 ರಿಂದ 12 ನೇ ತರಗತಿವರೆಗೆ ಶಾಲೆ, ಕಾಲೇಜುಗಳಲ್ಲಿ ಶೇ.100 ರಷ್ಟು ಹಾಜರಾತಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಶನಿವಾರ ಮತ್ತು ಭಾನುವಾರದಂದು ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತದೆ.
ಕೋವಿಡ್ 19 ತಜ್ಞರ ಸಲಹೆ, ಸೂಚನೆಯಂತೆ ಕೋವಿಡ್-19 ಪಾಸಿಟಿವಿಟಿ ಪ್ರಮಾಣ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100 ರಷ್ಟು ಹಾಜರಾತಿಯೊಂದಿಗೆ ಶಾಲೆ, ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ.
ವಿದ್ಯಾರ್ಥಿಗಳು, ಶಿಕ್ಷಕರು, ಬೋಧಕೇತರ ಸಿಬ್ಬಂದಿ ಹಾಗೂ ಶಾಲಾ, ಕಾಲೇಜುಗಳ ಆಡಳಿತ ಮಂಡಳಿಗಳ ಸಹಕಾರ, ಕೋವಿಡ್-19 ಸುರಕ್ಷತಾ ನಿಯಮಗಳ ಪಾಲನೆ, ಯಶಸ್ವಿ ಕೋವಿಡ್-19 ಲಸಿಕೆ ಅಭಿಯಾನದಿಂದ ಕೋವಿಡ್-19 ಮೂರನೇ ಅಲೆಯ ಭೀತಿ ಕಡಿಮೆ ಆಗಿದೆ. ಈ ಹಿನ್ನೆಲೆಯಲ್ಲಿ 6 ರಿಂದ 12 ನೇ ವರ್ಗದವರೆಗಿನ ತರಗತಿಗಳನ್ನು ಪೂರ್ಣ ಪ್ರಮಾಣದಲ್ಲಿ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.