ಬೆಂಗಳೂರು: ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಶಾಸಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಕರ್ನಾಟಕದ ವಿಧಾನಸಭೆ, ವಿಧಾನಪರಿಷತ್ ಸದಸ್ಯರನ್ನು ಭೇಟಿಯಾಗುತ್ತಿರುವುದು ಸಂತಸ ತಂದಿದೆ. ಕರ್ನಾಟಕಕ್ಕೆ ಬರುವ ಹಲವರು ಇಲ್ಲಿನ ವಿಧಾನಸೌಧವನ್ನು ನೋಡುತ್ತಾರೆ ಇಂಥ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ, ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರಿಗೆ ಧನ್ಯಾವಾದ ಹೇಳುತ್ತೇನೆ. ಬಸವಣ್ಣನವರ ಅನುಭವ ಮಂಟಪ ಪ್ರಜಾಪ್ರಭುತ್ವಕ್ಕೆ ಬುನಾದಿಯಾಯಿತು ಎಂದು ಸ್ಮರಿಸಿದರು.
ಇಡೀ ವಿಶ್ವ ಸಂಸದೀಯ ಪ್ರಜಾಪ್ರಭುತ್ವದ ಅಡಿಯಲ್ಲಿ ಸರ್ಕಾರ ನಿರ್ವಹಿಸಲು ಬಯಸುತ್ತಿದೆ. ಸಂವಾದ, ಚರ್ಚೆ ಪ್ರಜಾಪ್ರಭುತ್ವದ ಜೀವಾಳ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ದಿನೇ ದಿನೇ ಸದೃಢವಾಗುತ್ತಿದೆ. ಜನಪ್ರತಿನಿಧಿಗಳು ಸದನದ ಚರ್ಚೆಯಲ್ಲಿ ಸಕ್ರಿಯರಾಗಿ ಭಾಗವಹಿಸಬೇಕು. ಜನಹಿತ, ಜನ ಕಲ್ಯಾಣಕ್ಕೆ ಜನಪ್ರತಿನಿಧಿಗಳು ಒತ್ತು ನೀಡಬೇಕು ಎಂದು ಹೇಳಿದರು.
ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಗೌರವ. ಜನಪರ ಸಮಸ್ಯೆಗಳ ಬಗ್ಗೆ ಸದನಗಳಲ್ಲಿ ಚರ್ಚೆಯಾಗಬೇಕು. ಜನರ ಸಾಮಾಜಿಕ, ಆರ್ಥಿಕ ಉನ್ನತಿಗಾಗಿ ಶ್ರಮಿಸಬೇಕು. ಆದರೆ ಇಂದು ನಿರೀಕ್ಷಿತ ಮಟ್ಟದಲ್ಲಿ ಸದನಗಳಲ್ಲಿ ಕಲಾಪ ನಡೆಯುತ್ತಿಲ್ಲ ಎಂಬುದು ಬೇಸರದ ಸಂಗತಿ. ಸದನದ ಅಮೂಲ್ಯ ಸಮಯ ವ್ಯರ್ಥವಾಗಬಾರದು. ಕಲಾಪಕ್ಕೆ ಅಡೆತಡೆಯಾದರೆ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲ್ಲ, ಮಹತ್ವದ ಮಸೂದೆಗಳ ಮಂಡನೆಯೂ ಕಷ್ಟವಾಗುತ್ತದೆ. ಪ್ರತಿಭಟನೆ ಸದನದ ಘನತೆಯನ್ನು ಮೀರಬಾರದು. ಸದಸ್ಯರು ಪ್ರಬುದ್ಧತೆ, ಔದಾರ್ಯ ಹೊಂದಿರಬೇಕು. ಸದನದಲ್ಲಿ ಶಿಸ್ತು, ಸಂಯಮವನ್ನು ರೂಢಿಸಿಕೊಳ್ಳಬೇಕು. ಖಾಸಗಿ ಜೀವನದಲ್ಲೂ ಸದಸ್ಯರ ನಡತೆ ಮಾದರಿಯಾಗಿರಬೇಕು ಎಂದು ಪಾಠ ಮಾಡಿದರು.