ಬೆಂಗಳೂರು: ಬೆಂಗಳೂರಿನ ನ್ಯೂ ತರಗುಪೇಟೆಯಲ್ಲಿ ಸಂಭವಿಸಿದ ನಿಗೂಢ ಸ್ಫೋಟಕ್ಕೆ ಪಟಾಕಿ ಕಾರಣ ಎಂದು ಪೊಲೀಸರು ಹೇಳಿಕೆ ನೀಡುತ್ತಿದ್ದರೂ ಸ್ಫೋಟಕ್ಕೆ ಅಸಲಿ ಕಾರಣವೇ ಬೇರೆ ಎಂಬುದು ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ಪೊಲೀಸರ ತನಿಖೆ ಚುರುಕುಗೊಂಡಿದೆ.
ನಿನ್ನೆ ಮಧ್ಯಾಹ್ನ ಚಾಮರಾಜಪೇಟೆಯ ನ್ಯೂ ತರಗು ಪೇಟೆಯ ಗೋದಾಮಿನಲ್ಲಿ ಸಂಭವಿಸಿದ ಭಯಂಕರ ಸ್ಫೋಟಕ್ಕೆ ಮೂವರು ಸಾವನ್ನಪ್ಪಿದ್ದು, ನಾಲ್ಕು ಜನ ಗಂಭೀರವಾಗಿ ಗಾಯಗೊಂಡಿದ್ದರು. ಗೋದಾಮಿನ ಹೊರ ಭಾಗದಲ್ಲಿ ನಿಂತಿದ್ದ 10ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿದ್ದವು. ಈ ನಿಗೂಢ ಸ್ಫೋಟ ರಾಜಧಾನಿ ಬೆಂಗಳೂರಿಗರನ್ನೇ ತಲ್ಲಣಗೊಳಿಸಿದೆ. ಸ್ಫೋಟದ ಕಾರಣ ಹುಡುಕುತ್ತಿರುವ ಪೊಲೀಸರು ಪ್ರಾಥಮಿಕ ತನಿಖೆ ಪ್ರಕಾರ ಮಕ್ಕಳು ಆಟಿಕೆಗೆ ಬಳಸುವ ಪಟಾಕಿಯಿಂದ ಸ್ಫೋಟ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ಸ್ಫೋಟ ಸಂಭವಿಸಲು ಕೇವಲ ಪಟಾಕಿ ಕಾರಣವಲ್ಲ ಎಂಬುದು ತಜ್ಞರ ಅಭಿಪ್ರಾಯ.
80ಕ್ಕೂ ಹೆಚ್ಚು ಪಟಾಕಿ ಬಾಕ್ಸ್ ಇರುವ ಗೋದಾಮಿನಲ್ಲಿ ಕೇವಲ 2 ಬಾಕ್ಸ್ ಪಟಾಕಿ ಸಿಡಿದು ಇಷ್ಟು ದೊಡ್ಡ ಮಟ್ಟದ ಸ್ಫೋಟ ಸಂಭವಿಸಲ್ಲ. ಬೇರೆ ಕೆಮಿಕಲ್ ನಿಂದ ಈ ಬೃಹತ್ ಸ್ಫೋಟ ಆಗಿರುವ ಸಾಧ್ಯತೆ ಇದೆ ಎಂದು ನುರಿತ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಪಟಾಕಿಯಲ್ಲಿ ಬಳಸುವ ಪೊಟಾಷಿಯಂ, ನೈಟ್ರೆಟ್, ಸಲ್ಫರ್ ಡೈ ಆಕ್ಸೈಡ್, ಸೆಲ್ಯುಲೋಸ್ ನೈಟ್ರೇಟ್ ಅಪಾಯಕಾರಿ ನಿಜ. ಆದರೆ ತರಗು ಪೇಟೆಯಲ್ಲಿನ ಸ್ಫೋಟದ ಹಿಂದೆ ಬೇರೆ ರಾಸಾಯನಿಕ ವಸ್ತುಗಳ ಬಳಕೆ ಇರಬಹುದು ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ.