ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಶಾಲೆಯಿಂದ ದೂರವೇ ಇದ್ದ ಮಕ್ಕಳಿಗೆ ಅದ್ಧೂರಿ ಸ್ವಾಗತ ನೀಡುವ ಮೂಲಕ ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದೆ. ಮಧ್ಯ ಪ್ರದೇಶದಲ್ಲಿ ಸೆಪ್ಟೆಂಬರ್ 20ರಿಂದ ಪ್ರಾಥಮಿಕ ಶಾಲೆಗಳು ಪುನಾರಂಭಗೊಂಡಿವೆ.
ಡೋಲುಗಳ ಸಮೇತ ಶಾಲೆಗೆ ಮರಳಿದ ಮಕ್ಕಳು ‘ಮಾಮಾ ಶಿವರಾಜ್ಗೆ ಧನ್ಯವಾದ’ ಎಂದು ಬರೆಯಲಾದ ನಾಮಫಲಕ ಹಿಡಿದು ಮೆರವಣಿಗೆ ಮೂಲಕ ತರಗತಿ ಪ್ರವೇಶಿಸಿದ್ದಾರೆ.
ಹಿರಿಯ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳು ಹಂತ ಹಂತವಾಗಿ ಆರಂಭವಾಗಿದ್ದರೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರಿ ಸುಮಾರು ಒಂದೂವರೆ ವರ್ಷಗಳ ಬಳಿಕ ಶಾಲೆ ಪುನಾರಂಭಗೊಂಡಂತೆ ಆಗಿದೆ.
ಈಗಲೂ ಅನೇಕ ಪೋಷಕರು ಮಕ್ಕಳನ್ನು ಶಾಲೆಗ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಮಕ್ಕಳ ಸಂಖ್ಯೆ ಕಡಿಮೆಯೇ ಇತ್ತು. ಶಾಲೆಗೆ ಹಾಜರಾದ ಮಕ್ಕಳು ಖುಷಿಯಿಂದಲೇ ಸಹಪಾಠಿಗಳೊಂದಿಗೆ ಸಮಯ ಕಳೆದಿದ್ದಾರೆ.
ಕೋವಿಡ್ 19 ಮಾರ್ಗಸೂಚಿಯ ಪ್ರಕಾರ, ಸರ್ಕಾರವು 50 ಪ್ರತಿಶತ ಸಾಮರ್ಥ್ಯದ ಜೊತೆಗೆ ಮಕ್ಕಳನ್ನು ತರಗತಿಗೆ ಕರೆ ತರಲು ಅನುಮತಿ ನೀಡಿದೆ. ಸೆಪ್ಟೆಂಬರ್ 20ರಿಂದ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸುವಲ್ಲಿ ಶಿಕ್ಷಕರು ಅನೇಕ ದಿನಗಳಿಂದ ಪ್ರಯತ್ನ ಪಟ್ಟಿದ್ದರು.
ಶಾಲೆಗೆ ಆಗಮಿಸಿ ಮಕ್ಕಳನ್ನು ಶಿಕ್ಷಕರು ಹೂವಿನ ಹಾರ ಹಾಕಿ ಸ್ವಾಗತಿಸಿದರು. ಹಾಗೂ ಮಕ್ಕಳಿಗೆ ಜಿಲೇಬಿಯನ್ನು ನೀಡಿ ಬಾಯಿ ಸಿಹಿ ಮಾಡಲಾಯ್ತು.