ಮೈಸೂರಿನ ವಾಣಿಜ್ಯ ತೆರಿಗೆ ಕಚೇರಿಗೆ ಬಾಂಬ್ ಬೆದರಿಕೆ ಕರೆಯೊಂದು ಬಂದಿದೆ. ಇದರಿಂದ ಭಯಗೊಂಡ ಸಿಬ್ಬಂದಿ ಕಚೇರಿಯಿಂದ ಹೊರಗೆ ಓಡಿ ಬಂದಿದ್ದಾರೆ. ಮೈಸೂರಿನ ದೇವರಾಜ ಮೊಹಲ್ಲಾದಲ್ಲಿರುವ ಕಚೇರಿಯಲ್ಲಿ ಈ ಘಟನೆ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.
ವಾಣಿಜ್ಯ ತೆರಿಗೆ ಜಂಟಿ ಆಯುಕ್ತರಿಗೆ ಪತ್ರದ ಮೂಲಕ ಬಾಂಬ್ ಬೆದರಿಕೆ ನೀಡಲಾಗಿತ್ತು. ಲಕ್ಷ್ಮೀಪುರಂನಲ್ಲಿರುವ ಆಡಿಟರ್ ಕಚೇರಿಯ ಗೇಟ್ನಲ್ಲಿ ಒಂದು ಪತ್ರವನ್ನು ಇಡಲಾಗಿತ್ತು. ಇದರಲ್ಲಿ ಮಧ್ಯಾಹ್ನ 12 ರಿಂದ 1 ಗಂಟೆಯ ಒಳಗಾಗಿ ಬಾಂಬ್ ಸ್ಫೋಟವಾಗುವ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಾಂಬ್ ಬೆದರಿಕೆ ಕರೆ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಅಲರ್ಟ್ ಆದ ಪೊಲೀಸರು ಕಟ್ಟಡದ ಸುತ್ತ ಬಿಗಿ ಭದ್ರತೆ ಒದಗಿಸಿದ್ದಾರೆ. ಎರಡು ಗಂಟೆಗಿಂತಲೂ ಅಧಿಕ ಸಮಯದಿಂದ ತಪಾಸಣೆ ನಡೆಯುತ್ತಲೇ ಇದೆ. ಕಚೇರಿ ಸಿಬ್ಬಂದಿಯ ಬ್ಯಾಗ್ಗಳನ್ನೂ ಬಿಡದೇ ತಪಾಸಣೆ ನಡೆಸಲಾಗಿದೆ. ಟೋಯಿಂಗ್ ವಾಹನದ ಮೂಲಕ ಕಚೇರಿಯ ಸುತ್ತಮುತ್ತ ನಿಲ್ಲಿಸಲಾಗಿದ್ದ ಎಲ್ಲಾ ವಾಹನಗಳನ್ನು ತೆರವು ಮಾಡಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಡಿಸಿಪಿ ಪ್ರದೀಪ್ ಗುಂಟಿ, ಮೊದಲ ಹಂತದ ತಪಾಸಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ತಪಾಸಣೆಯಲ್ಲಿ ಯಾವುದೇ ಸ್ಫೋಟಕಗಳು ಪತ್ತೆಯಾಗಿಲ್ಲ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಕರೆ ಎಂದೆನಿಸುತ್ತಿದೆ. ಆದರೂ ಎರಡನೇ ಹಂತದಲ್ಲಿ ಮತ್ತೊಮ್ಮೆ ತಪಾಸಣೆ ನಡೆಸಲಿದ್ದೇವೆ. ಕಟ್ಟಡದ ಎಲ್ಲಾ ಕಡೆಗಳಲ್ಲಿ ತಪಾಸಣೆ ಕಾರ್ಯ ಪೂರ್ಣಗೊಂಡಿದೆ. ಪತ್ರ ಎಲ್ಲಿಂದ ಬಂತು ಎಂಬುವುದರ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಹೇಳಿದ್ದಾರೆ.