ಸುಳ್ಳು ಹೇಳುವುದಕ್ಕೆ ಏನಾದರೂ ಆಸ್ಕರ್ ಪ್ರಶಸ್ತಿ ಇದ್ದರೆ ಅದು ಪ್ರಧಾನಿ ಮೋದಿಯವರಿಗೇ ಸಲ್ಲುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು ಪ್ರಧಾನಿ ಮೋದಿ ಸುಳ್ಳು ಹೇಳಿಕೊಂಡೇ ಅಧಿಕಾರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡಿದ್ರು.
ಕೋವಿಡ್ ನಿಯಂತ್ರಣ ಮಾಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಮೂರನೆ ಅಲೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. ಅನೇಕರು ಬೀದಿಗೆ ಬಂದಿದ್ದಾರೆ. ಎರಡನೇ ಅಲೆಯಲ್ಲಿ 3.70 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಸಚಿವ ಸುಧಾಕರ್ ಕೇವಲ 37 ಸಾವಿರ ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರ ಮೃತರ ಅಂಕಿ ಅಂಶದ ವಿಚಾರದಲ್ಲಿ ಸ್ಪಷ್ಟತೆ ಹೊಂದಿಲ್ಲ ಎಂದು ಆರೋಪಿಸಿದ್ರು.
ಕಳೆದ 7 ವರ್ಷಗಳಿಂದ ಪ್ರಧಾನಿ ಮೋದಿ ಬರೀ ಸುಳ್ಳು ಹೇಳ್ತಿದ್ದಾರೆ. ದೇಶದಲ್ಲಿ ಕೋಟ್ಯಂತರ ಮಂದಿ ನಿರುದ್ಯೋಗಿಗಳಿದ್ದಾರೆ. ಸುಳ್ಳಿಗೊಂದು ಆಸ್ಕರ್ ಇದ್ದರೆ ಅದನ್ನು ಮೋದಿಗೇ ನೀಡಬೇಕು. ಮೋದಿ ಸರ್ಕಾರದಿಂದಾಗಿ ಜನರ ಜೀವನ ನರಕವಾಗಿದೆ ಎಂದು ಕಿರಿಕಾರಿದ್ರು.
ಸಿಎಂ ಬೊಮ್ಮಾಯಿ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ ಟೇಕಾಫ್ ಆಗಿದೆಯಾ ಅನ್ನೋದು ನನಗಂತೂ ಕಾಣುತ್ತಿಲ್ಲ. ಬಿಜೆಪಿ ಈಗ ಮೂರು ಬಾಗಿಲ ಮನೆಯಾಗಿದೆ. ಬೊಮ್ಮಾಯಿ ಮಧ್ಯದಲ್ಲಿ ಸಿಲುಕಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಆರ್ಎಸ್ಎಸ್ ಹಾಗೂ ಹೈಕಮಾಂಡ್ ಈ ಮೂವರಲ್ಲಿ ಯಾರ ಮಾತು ಕೇಳಬೇಕು ಎಂಬ ಗೊಂದಲದಲ್ಲಿ ಬೊಮ್ಮಾಯಿ ಇದ್ದಾರೆ ಎಂದು ಹೇಳಿದ್ರು.