ಬೆಂಗಳೂರು: ಮುಷ್ಕರ ನಡೆಸಿ ಕೆಲಸ ಕಳೆದುಕೊಂಡಿದ್ದ 4200 ಸಾರಿಗೆ ನೌಕರರನ್ನು ಪುನರ್ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ಸಂದರ್ಭದಲ್ಲಿ ಸೇವೆಯಿಂದ ಅಮಾನತು, ವಜಾಗೊಂಡ 4 ರಸ್ತೆ ಸಾರಿಗೆ ನಿಗಮಗಳ 4200 ನೌಕರರನ್ನು ಪುನರ್ ನೇಮಕಾತಿ ಮಾಡಿಕೊಳ್ಳಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಸಂಘಟನೆಗಳ ಮುಖಂಡರೊಂದಿಗೆ ಅವರು ಸಭೆ ನಡೆಸಿ ಈ ಬಗ್ಗೆ ಭರವಸೆ ನೀಡಿದ್ದಾರೆ. ವಜಾ ಮತ್ತು ಅಮಾನತುಗೊಂಡ ನೌಕರರ ಪುನರ್ ನೇಮಕ ಮತ್ತು ವರ್ಗಾವಣೆ ರದ್ದತಿಗೆ ಸಿಎಂ ಒಪ್ಪಿಗೆ ನೀಡಿದ್ದಾರೆ. ಶೀಘ್ರವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನೌಕರರನ್ನು ಅವರು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಡಿಪೋಗಳಿಗೆ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.