ಬೆಂಗಳೂರು: ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಶೇಕಡ 100 ರಷ್ಟು ಭರ್ತಿಗೆ ಅವಕಾಶ ಕಲ್ಪಿಸುವಂತೆ ಕೋರಿ ಸ್ಯಾಂಡಲ್ವುಡ್ ನಿರ್ಮಾಪಕರು ಇಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ನಿರ್ಮಾಪಕರಾದ ಜಯಣ್ಣ, ಸೂರಪ್ಪಬಾಬು, ಕೆ.ಪಿ. ಶ್ರೀಕಾಂತ್ ಅವರು ಸಚಿವರನ್ನು ಭೇಟಿಯಾಗಿ ಚಿತ್ರಮಂದಿರದಲ್ಲಿ ಶೇಕಡ 100 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಹೇಳಿದ್ದಾರೆ. ನಿರ್ಮಾಪಕರು ಸಿನಿಮಾ ನಿರ್ಮಿಸಿ ತಿಂಗಳುಗಳೇ ಕಳೆದರೂ ಬಿಡುಗಡೆ ಮಾಡಲು ಸಾಧ್ಯವಾಗುತ್ತಿಲ್ಲ. ಶೇಕಡ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿರುವುದರಿಂದ ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಮಾಡಲು ಸಮಸ್ಯೆಯಾಗಿದೆ. ಈ ನಿಟ್ಟಿನಲ್ಲಿ ಸಂಕಷ್ಟದಲ್ಲಿರುವ ನಿರ್ಮಾಪಕರ ನೆರವಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.
ಚಿತ್ರರಂಗದ ಸಂಕಷ್ಟದ ಬಗ್ಗೆ ಸರ್ಕಾರ ಗಮನಹರಿಸಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.