ಪಾಕಿಸ್ತಾನದ ಹಿಂದೂ ಮಹಿಳೆ ಡಾ. ಸನಾ ರಾಮಚಂದ್ ಗುಲ್ವಾನಿ ಹೊಸ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಪಾಕಿಸ್ತಾನದ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸು ಮಾಡಿದ ಮೊದಲ ಹಿಂದೂ ಮಹಿಳೆ ಎಂಬ ಕೀರ್ತಿಗೆ ಸನಾ ಪಾತ್ರರಾಗಿದ್ದಾರೆ.
ಪಾಕಿಸ್ತಾನದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಸೆಂಟ್ರಲ್ ಸುಪೀರಿಯರ್ ಸರ್ವೀಸ್ ಪರೀಕ್ಷೆಯನ್ನು ಸನಾ ಮೊದಲ ಪ್ರಯತ್ನದಲ್ಲಿಯೇ ಪಾಸು ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಆಡಳಿತಾತ್ಮಕ ಸೇವೆಗಳಲ್ಲಿ ಸನಾ ಕೂಡ ನಿಯೋಜನೆಗೊಳ್ಳಲಿದ್ದಾರೆ. ಭಾರತದಲ್ಲಿ ನಾಗರಿಕ ಸೇವಾ ಪರೀಕ್ಷೆಗಳಂತೆಯೇ ಪಾಕಿಸ್ತಾನದಲ್ಲಿ ಸೆಂಟ್ರಲ್ ಸುಪೀರಿಯರ್ ಸರ್ವೀಸ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ವರದಿಗಳ ಪ್ರಕಾರ ಸನಾ ಮೊದಲು ಬೇರೆ ರೀತಿಯ ಭವಿಷ್ಯದ ಕನಸುಗಳನ್ನು ಕಂಡಿದ್ದರಂತೆ. ಸನಾ ಪೋಷಕರು ಕೂಡ ಆಕೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಎಂಬ ಕನಸನ್ನು ಹೊಂದಿದ್ದರಂತೆ. ಅದೇ ರೀತಿ ಸನಾ 2016ರಲ್ಲಿ ಶಹೀದ್ ಮೊಹತರ್ಮ ಬೆನಜೀರ್ ಭುಟ್ಟೋ ವೈದ್ಯಕೀಯ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿಯನ್ನು ಸ್ವೀಕರಿಸಿದ್ದರು.
ನಾನು ತರಬೇತಿಯನ್ನು ಆರಂಭಿಸಿದ ವೇಳೆ ನನ್ನನ್ನು ಕೆಲ ತಿಂಗಳುಗಳ ಕಾಲ ಶಿಕಾರ್ಪುರಕ್ಕೆ ಸೇರಿದ ಚಿಕ್ಕ ಪಟ್ಟಣ ಲಖಿಯಾ ತಾಲೂಕಾಸ್ಪತ್ರೆಯಲ್ಲಿ ಮಹಿಳಾ ವೈದ್ಯಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಅಲ್ಲಿನ ಕಳಪೆ ವೈದ್ಯಕೀಯ ಸ್ಥಿತಿಯನ್ನು ನೋಡಿ ನಾನು ಆಘಾತಕ್ಕೊಳಗಾಗಿದ್ದೆ. ಅಲ್ಲಿ ಔಷಧಿ ಇರಲಿಲ್ಲ, ವೈದ್ಯರು ಇರಲಿಲ್ಲ. ಮೂಲಭೂತ ಸೌಕರ್ಯಗಳೂ ಇರಲಿಲ್ಲ. ಇದೆಲ್ಲವನ್ನು ನೋಡಿ ನಾನು ನನ್ನ ಜೀವನದ ಗುರಿಯನ್ನು ಬದಲಾಯಿಸಿಕೊಂಡೆ. ಸಮಾಜದಲ್ಲಿ ಬದಲಾವಣೆಯನ್ನು ತರಲು ನಾನು ಈ ಪರೀಕ್ಷೆಯಲ್ಲಿ ಉತ್ತೀರ್ಣಳಾಗಲೇಬೇಕು ಎಂದು ನಿರ್ಧರಿಸಿದೆ ಎಂದು ಹೇಳಿದ್ರು.