
ಮನೆ ಅಥವಾ ಫ್ಲಾಟ್ ಖರೀದಿಗೆ ಜನರು ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುತ್ತಾರೆ. ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಕೆಲವು ಪ್ರಮುಖ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಮೊದಲೇ ತಿಳಿದಿದ್ದರೆ ನಿಮಗೆ ಮುಂದೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇಲ್ಲವೆಂದ್ರೆ ಅರ್ಜಿ ಸಲ್ಲಿಸಿದ ನಂತ್ರ ಸಮಸ್ಯೆ ಎದುರಿಸಬೇಕಾಗುತ್ತದೆ.
ಅನೇಕರು ಅಗತ್ಯವಿರುವ ಹಣದಲ್ಲಿ ಹೆಚ್ಚಿನ ಮೊತ್ತವನ್ನು ಸಾಲದ ರೂಪದಲ್ಲಿ ಪಡೆಯಲು ಅರ್ಜಿ ಸಲ್ಲಿಸುತ್ತಾರೆ. ಆದ್ರೆ ಬ್ಯಾಂಕ್, ಹೆಚ್ಚಿನ ಹಣವನ್ನು ಸಾಲದ ರೂಪದಲ್ಲಿ ನೀಡಲು ನಿರಾಕರಿಸುವ ಸಾಧ್ಯತೆಯಿದೆ. ಹಾಗಾಗಿ ಅರ್ಜಿ ಸಲ್ಲಿಸುವ ಮೊದಲು, ಬ್ಯಾಂಕ್ ಎಷ್ಟು ಮೊತ್ತವನ್ನು ಸಾಲದ ರೂಪದಲ್ಲಿ ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಉಳಿದ ಹಣವನ್ನು ಆಗ ನಗದು ರೂಪದಲ್ಲಿ ವ್ಯವಸ್ಥೆ ಮಾಡಬಹುದು.
ಮನೆ ಅಥವಾ ಫ್ಲಾಟ್ ಖರೀದಿಸುವ ವೇಳೆ, ಮಾರಾಟಗಾರರು ಎಲ್ಲ ನಿಯಮಗಳನ್ನು ಪಾಲನೆ ಮಾಡ್ತಿದ್ದಾರಾ ಎಂಬುದನ್ನು ತಿಳಿದುಕೊಳ್ಳಿ. ಗೃಹ ಸಾಲವನ್ನು ತ್ವರಿತವಾಗಿ ಅನುಮೋದಿಸಲು ಯೋಗ್ಯವಾದ ಎಲ್ಲ ಮಾಹಿತಿ ಇದ್ಯಾ ಎಂಬುದನ್ನು ತಿಳಿಯಿರಿ.
ಉಳಿತಾಯ ಅಥವಾ ವೇತನ ಖಾತೆಯನ್ನು ಹೊಂದಿದ್ದರೆ, ಅದೇ ಬ್ಯಾಂಕ್ ನಲ್ಲಿ ಗೃಹ ಸಾಲಕ್ಕೆ ಅರ್ಜಿ ಸಲ್ಲಿಸುವುದು ಬಹಳ ಉತ್ತಮ. ಬ್ಯಾಂಕ್ ಈಗಾಗಲೇ ಕ್ರೆಡಿಟ್ ಇತಿಹಾಸ ಮತ್ತು ಕಂಪನಿ, ವೇತನ ಇತ್ಯಾದಿ ವೈಯಕ್ತಿಕ ವಿವರಗಳನ್ನು ತಿಳಿದಿದ್ದರೆ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ನೀವು ಹೆಚ್ಚಿನ ಸಮಯ ಕಾಯಬೇಕಾಗಿಲ್ಲ.
ಬ್ಯಾಂಕ್ ನಲ್ಲಿ ಸಾಲ ಪಡೆಯಲು ಕ್ರೆಡಿಟ್ ಸ್ಕೋರ್ ಮುಖ್ಯವಾಗುತ್ತದೆ. ಸಾಲ ನೀಡುವ ಮೊದಲು ಬ್ಯಾಂಕ್, ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುತ್ತದೆ. ಬ್ಯಾಂಕುಗಳು ಉತ್ತಮ ಸ್ಕೋರ್ ಹೊಂದಿರುವವರಿಗೆ ಅಗ್ಗದ ಗೃಹ ಸಾಲವನ್ನು ನೀಡುತ್ತದೆ.
ಸಾಲಕ್ಕಿಂತ ಸಂಬಳ ಕಡಿಮೆಯಿದ್ದರೆ, ಸಾಲ ಸುಲಭವಾಗಿ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಜಂಟಿ ಖಾತೆಯಲ್ಲಿ ಸಾಲ ಪಡೆಯಬಹುದು. ಸಾಲ ಮರುಪಾವತಿಗಾಗಿ ದೀರ್ಘಾವಧಿಯನ್ನು ಆಯ್ಕೆ ಮಾಡಬಹುದು.
ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು ಇಎಂಐ ಬಗ್ಗೆ ತಿಳಿದುಕೊಳ್ಳಿ. ತಿಂಗಳಿಗೆ ಎಷ್ಟು ಇಎಂಐ ಪಾವತಿಸಬೇಕಾಗುತ್ತದೆ ಎಂಬುದನ್ನು ತಿಳಿಯಿರಿ.