ಇತ್ತೀಚೆಗೆ ಒಟಿಟಿಯಲ್ಲಿ ಬಿಡುಗಡೆಯಾದ ’ಹೋಮ್’ ಎಂಬ ಮಲಯಾಳಂ ಭಾಷೆಯ ಸಿನಿಮಾ ನೋಡಿದವರಿಗೆ, ಮನೆಯಲ್ಲಿನ ತಂದೆ-ತಾಯಿ ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲು ಎಷ್ಟು ಸಾಹಸ ಪಡುತ್ತಾರೆ. ತಮ್ಮ ಮಕ್ಕಳೇ ಎಲ್ಲಿ ತಮ್ಮನ್ನು ತಂತ್ರಜ್ಞಾನದ ಅರಿವಿನ ಕೊರತೆ ಇರುವವರು ಎಂದು ದೂರ ತಳ್ಳಿಬಿಡುತ್ತಾರೆಯೇ ಎಂಬ ಆತಂಕ ಅವರಲ್ಲಿ ಮನೆ ಮಾಡಿರುವುದು ಗಮನಕ್ಕೆ ಬಂದಿರುತ್ತದೆ.
ಮೊಬೈಲ್‌ನಲ್ಲಿ ವಾಟ್ಸ್‌ಆ್ಯಪ್, ಫೇಸ್‌ಬುಕ್ , ಇನ್‌ಸ್ಟಾಗ್ರಾಮ್ ಬಳಸುವುದು. ವಿಡಿಯೊ ಕಾಲ್ ಮಾಡುವುದನ್ನು ಕಲಿಯುವುದು. ಚಾಟಿಂಗ್‌ನಲ್ಲಿ ಶಾರ್ಟ್ ಕೋಡ್ ಕಲಿಯುವುದು ಹಿಂದಿನ ಪೀಳಿಗೆಗೆ ಸ್ವಲ್ಪ ಸವಾಲಿನ ಕೆಲಸವೇ ಆಗಿಹೋಗಿದೆ.
ಉದಾಹರಣೆಗೆ, ಮುಂಚೆ ಆಟೋ ಬೇಕೆಂದರೆ ಮನೆಯ ಹತ್ತಿರದ ಆಟೋ ಸ್ಟ್ಯಾಂಡ್‌ಗೆ ಹೋಗುತ್ತಿದ್ದರು. ಈಗ, ಆಟೋ ಸೀದಾ ಮನೆ ಬಾಗಿಲಿಗೆ ಬಂದು ಕಾಯುತ್ತಿರುತ್ತದೆ. ಅದೇ, ಒಲಾ-ಊಬರ್ ಬುಕ್ಕಿಂಗ್ ಇದೆಯಲ್ಲ.
ಇಪಿಎಫ್ ಹೂಡಿಕೆಯಿಂದ ಕೋಟ್ಯಾಧೀಶರಾಗಬೇಕೇ….? ಇಗೋ ಇಲ್ಲಿದೆ ಐಡಿಯಾ
ಇಂಥ ಆ್ಯಪ್‌ಗಳ ರಾಶಿಯಲ್ಲಿ ಯುವ ಪೀಳಿಗೆ ಮುಳುಗಿಹೋಗಿದೆ. ಅನಿವಾರ್ಯವಾಗಿ ತಂದೆ-ತಾಯಿ ಕೂಡ ಸ್ಮಾರ್ಟ್‌ಫೋನ್ ಹಿಡಿದು ಆ್ಯಪ್‌ಗಳ ಕಲಿಕೆಯಲ್ಲಿ ನಿರತರಾಗಿದ್ದಾರೆ.
ಅಂಥದ್ದೇ ಒಂದು ಸಾಹಸ ಮಾಡಿದವರು ರಾಹುಲ್ ಗುಪ್ತಾ ಎಂಬ ಟ್ವಿಟರ್ ಬಳಕೆದಾರರ ತಂದೆ. ಅವರು ಊಬರ್ ಮೂಲಕ ಟ್ಯಾಕ್ಸಿ ಬುಕ್ ಮಾಡುವ ಹಂತಹಂತದ ಕ್ರಮಗಳನ್ನು ಡೈರಿಯೊಂದಲ್ಲಿ ಬರೆದಿಟ್ಟುಕೊಂಡಿದ್ದಾರೆ. ಆ್ಯಪ್ ಕ್ಲಿಕ್ ಮಾಡುವುದರಿಂದ ಆರಂಭಗೊಂಡು, ರೈಡ್ ಬುಕ್ ಆಗುವ ತನಕ ಒಂದೊಂದೇ ಸಾಲು ಗೀಚಿಕೊಂಡಿದ್ದಾರೆ. ಇದನ್ನು ರಾಹುಲ್ ಗುಪ್ತಾ ಅವರು ಫೋಟೊ ತೆಗೆದು ಖುಷಿಯಿಂದ ಟ್ವೀಟ್ ಮಾಡಿದ್ದಾರೆ.
ಟ್ವೀಟಿಗರು ಈ ಫೋಟೊಗೆ ಮರುಳಾಗಿದ್ದು, ಹಿರಿಯರ ಶಿಸ್ತಿಗೆ ತಲೆಬಾಗಿದ್ದಾರೆ. ಇಳಿವಯಸ್ಸಿನಲ್ಲೂ ಯಾರಿಗೂ ಭಾರವಾಗಬಾರದು ಎಂದು ಟ್ಯಾಕ್ಸಿ ಬುಕ್ ಮಾಡಲು ನೋಟ್ಸ್ ಬರೆದುಕೊಂಡಿರುವುದಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.