ಬಿಹಾರದ ಅರಾರ್ಯಾದಲ್ಲಿ ಭಾನುವಾರ ತಡರಾತ್ರಿ ವ್ಯಕ್ತಿಯೊಬ್ಬ ಪ್ರಿಯತಮೆಯ ನೆರವಿನಿಂದ ತನ್ನ ಪತ್ನಿಯನ್ನು ಅಪ್ರಾಪ್ತ ಮಗಳ ಮುಂದೆ ಕೊಲೆ ಮಾಡಿದ್ದಾನೆ. ಆರೋಪಿ ಮತ್ತು ಆತನ ಗೆಳತಿಯನ್ನು ಗ್ರಾಮಸ್ಥರ ಸಹಾಯದಿಂದ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ಪೊಲೀಸರ ಪ್ರಕಾರ, ಈ ಘಟನೆ ಸಿಮರಾಹಾ ಪೊಲೀಸ್ ಠಾಣೆ ವ್ಯಾಪ್ತಿಯ ಖವಾಸ್‌ಪುರ ಗ್ರಾಮದಲ್ಲಿ ಸಂಭವಿಸಿದೆ. ಆರೋಪಿಯನ್ನು ಶ್ರವಣ್ ಸಿಂಗ್ ಎಂದು ಗುರುತಿಸಲಾಗಿದೆ.
ಸಿಮ್ರಾಹಾ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯಂತೆ, ರಾತ್ರಿ 8 ಗಂಟೆ ಸುಮಾರಿಗೆ ಮಹಿಳೆಯೊಬ್ಬಳನ್ನು ಆಕೆ ಗಂಡ ಬರ್ಬರವಾಗಿ ಹೊಡೆದು ಕೊಲೆ ಮಾಡಿದ್ದಾನೆ. ಗ್ರಾಮದ ಹೊರವಲಯದ ಹೊಲದಲ್ಲಿ ಶವವನ್ನು ವಿಲೇವಾರಿ ಮಾಡಲಾಗಿದೆ.
ಶ್ರವಣ್ ಸಿಂಗ್ ಗ್ರಾಮದ ಜಮುನಿದೇವಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ತನ್ನ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಭಾನುವಾರ ಸಂಜೆ ಅಮಲೇರಿದ ಸ್ಥಿತಿಯಲ್ಲಿ ಮನೆಗೆ ಬಂದಿದ್ದ ಆರೋಪಿ ಪತ್ನಿಯೊಂದಿಗೆ ಮತ್ತೆ ಜಗಳವಾಡಿ ಕಬ್ಬಿಣದ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಪ್ರಿಯತಮೆಯೊಂದಿಗೆ ಸೇರಿ ಹೊಲದಲ್ಲಿ ಮೃತದೇಹ ಹೂಳಲು ಪ್ರಯತ್ನಿಸಿದ್ದಾನೆ. ಇದೆಲ್ಲವನ್ನು ಕಂಡಿದ್ದ 12 ವರ್ಷದ ಪುತ್ರಿ ಜೋರಾಗಿ ಅಳುವುದನ್ನು ಕೇಳಿಸಿಕೊಂಡು ಸ್ಥಳಕ್ಕೆ ಬಂದ ಗ್ರಾಮಸ್ಥರು ಶ್ರವಣ್ ಸಿಂಗ್ ಮತ್ತು ಜಮುನಿದೇವಿ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಅಕ್ರಮ ಸಂಬಂಧದ ಕಾರಣಕ್ಕೆ ಪತ್ನಿಯೊಂದಿಗೆ ಶ್ರವಣ್ ಸಿಂಗ್ ಜಗಳವಾಡಿದ್ದಲ್ಲದೇ ಮಾನಸಿಕ ಮತ್ತು ದೈಹಿಕವಾಗಿ ಹಿಂಸಿಸುತ್ತಿದ್ದ. ಹಲವಾರು ಬಾರಿ ಪಂಚಾಯತ್ ಕೂಡ ಮಾಡಲಾಗಿತ್ತು ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಶ್ರವಣ್ ಸಿಂಗ್ ಮಗಳು ತನ್ನ ತಾಯಿಯನ್ನು ತನ್ನ ತಂದೆ ಹೇಗೆ ಕೊಲೆ ಮಾಡಿದ ಎಂದು ಪೊಲೀಸರಿಗೆ ಹೇಳಿದ್ದಾಳೆ. ಶ್ರವಣ್ ಮತ್ತು ಆತನ ಗೆಳತಿಯ ವಿರುದ್ಧ ಪೊಲೀಸರು ವಿವಿಧ ಐಪಿಸಿ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.