ಬೆಂಗಳೂರು: ಬಿಜೆಪಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ’ಆಪರೇಷನ್ ಹಸ್ತ’ ನಡೆಸಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೇಸರಿ ಪಾಳಯದ ಹಲವು ನಾಯಕರನ್ನು ಸಂಪರ್ಕಿಸಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.
ಸಚಿವ ಸ್ಥಾನದಿಂದ ವಂಚಿತರಾದ ಹಾಗೂ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನಗೊಂಡಿರುವ ಕೆಲ ಶಾಸಕರನ್ನು ಕಾಂಗ್ರೆಸ್ ತನ್ನತ್ತ ಸೆಳೆಯಲು ಪ್ರಯತ್ನಿಸಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನಿನ್ನೆ ಹೇಳಿಕೆ ನೀಡಿದ್ದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಡಿ.ಕೆ.ಶಿವಕುಮಾರ್ ಬಿಜೆಪಿಯ ಕೆಲ ಶಾಕರನ್ನು ಸಂಪರ್ಕಿಸಿದ್ದು, ಕಾಂಗ್ರೆಸ್ ಗೆ ಸೆಳೆಯಲು ಯತ್ನಿಸಿದ್ದಾರೆ ಎಂದಿರುವುದು ಕೈ ನಾಯಕ ಆಪರೇಷನ್ ಹಸ್ತದ ಬಗ್ಗೆ ಪುಷ್ಠಿ ನೀಡುವಂತಿದೆ.
ಈ ನಡುವೆ ಶಾಸಕ ಎಂ.ಪಿ.ಕುಮಾರಸ್ವಾಮಿಯವರನ್ನು ಡಿ.ಕೆ.ಶಿವಕುಮಾರ್ ಸಂಪರ್ಕಿಸಿದ್ದು, ಕಾಂಗ್ರೆಸ್ ಗೆ ಬರುವಂತೆ ಆಹ್ವಾನಿಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಎಂ.ಪಿ.ಕುಮಾರಸ್ವಾಮಿ, ನಾನು ಮೂಲತ: ಬಿಜೆಪಿಯವನು. ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ. ಡಿಕೆಶಿ ನನ್ನನ್ನು ಸಂಪರ್ಕಿಸಿಯೂ ಇಲ್ಲ. ಇದೆಲ್ಲವೂ ಕೇವಲ ಸುಳ್ಳುಸುದ್ದಿ ಎಂದಿದ್ದಾರೆ.
ನೀವೂ ನಿದ್ರೆಯಲ್ಲಿ ಗೊರಕೆ ಹೊಡೆಯುತ್ತೀರಾ…? ಹಾಗಾದ್ರೆ ತಿಳಿದಿರಿ ಈ ವಿಷಯ
ನನಗೆ ಬಿಜೆಪಿಯಲ್ಲಿ ಯಾವುದೇ ಬೇಸರ, ಅಸಮಾಧಾನವಿಲ್ಲ. ಸಚಿವ ಸ್ಥಾನ ನೀಡಿಲ್ಲ ಎಂದ ಮಾತ್ರಕ್ಕೆ ಬಿಜೆಪಿ ನನ್ನನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ ಎಂದರ್ಥವಲ್ಲ. ಬಿಜೆಪಿ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ. ನಾನು ಶಾಸಕನಾಗಿ ಈ ಮಟ್ಟಕ್ಕೆ ಬೆಳೆಯಲು ಬಿಜೆಪಿ ಕಾರಣ. ನನಗೆ ಸಚಿವ ಸ್ಥಾನ ಕೊಡಲಿ, ಕೊಡದೇ ಇರಲಿ ನಾನು ಬಿಜೆಪಿಯಲ್ಲಿಯೇ ಇದ್ದು, ಸಿಎಂಗೆ ಬೆಂಬಲ ನೀಡುವವನು. ನನ್ನ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವವನು ಹೊರತು ಕಾಂಗ್ರೆಸ್ ನತ್ತ ಮುಖಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು.