ನಗರದಲ್ಲಿ ಕಳೆದು ಹೋದ ಪರ್ಸ್ ಗಳು ಎಷ್ಟು ಹಿಂದಿರುಗಿಸಲ್ಪಟ್ಟಿವೆ ಎಂಬ ಸಮೀಕ್ಷೆಯಲ್ಲಿ ನಮ್ಮ ದೇಶದ ಮಹಾನಗರಿ ಮುಂಬೈ ವಿಶ್ವದಲ್ಲೇ 2ನೇ ಪ್ರಾಮಾಣಿಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರೀಡರ್ಸ್ ಡೈಜೆಸ್ಟ್ ನಿಯತಕಾಲಿಕವು ಸಾಮಾಜಿಕ ಪ್ರಯೋಗಕ್ಕೆ ಮುಂದಾಗಿದ್ದು, ಪ್ರಪಂಚದ ಅತ್ಯಂತ ಪ್ರಾಮಾಣಿಕ ನಗರಗಳನ್ನು ಪಟ್ಟಿ ಮಾಡಿದೆ. ಮ್ಯಾಗಜೀನ್ ನಡೆಸಿದ ಸಮೀಕ್ಷೆಯು ಹದಿನಾರು ನಗರಗಳಲ್ಲಿ ವ್ಯಾಲೆಟ್ (ಪರ್ಸ್) ಗಳನ್ನು ಬೀಳಿಸಿ, ಅವುಗಳಲ್ಲಿ ಎಷ್ಟು ಮರಳಿವೆ ಎಂಬುದನ್ನು ಆಧರಿಸಿ ಈ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಪ್ರತಿ ಪರ್ಸ್ ನಲ್ಲಿ ಮೊಬೈಲ್ ನಂಬರ್, ಕುಟುಂಬದ ಫೋಟೋ ಹಾಗೂ 50 ಪೌಂಡ್ (4,000 ರೂ.) ಇಡಲಾಗಿತ್ತು. ಆಂಸ್ಟರ್ಡ್ಯಾಮ್, ಬರ್ಲಿನ್, ಬುಕಾರೆಸ್ಟ್, ಬುಡಾಪೆಸ್ಟ್, ಹೆಲ್ಸಿಂಕಿ, ಲಿಸ್ಬನ್, ಲುಬ್ಲಜಾನಾ, ಲಂಡನ್, ಮ್ಯಾಡ್ರಿಡ್, ಮಾಸ್ಕೋ, ಮುಂಬೈ, ನ್ಯೂಯಾರ್ಕ್, ಪ್ರೇಗ್, ರಿಯೊ ಡಿ ಜನೈರೊ, ವಾರ್ಸಾ ಮತ್ತು ಜ್ಯೂರಿಚ್ ನಗರಗಳನ್ನು ಪ್ರಯೋಗಕ್ಕೆ ಒಳಪಡಿಸಲಾಯಿತು.
ಈ ಪ್ರಯೋಗದಲ್ಲಿ ಫಿನ್‌ಲ್ಯಾಂಡ್‌ನ ಹೆಲ್ಸಿಂಕಿ ಜಗತ್ತಿನ ʼಪ್ರಾಮಾಣಿಕ ನಗರʼ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಎರಡನೇ ಸ್ಥಾನ ಮುಂಬೈ ಪಾಲಾಗಿದೆ. ಈ ಸಾಮಾಜಿಕ ಪ್ರಯೋಗದಲ್ಲಿ ಅತ್ಯಂತ ಕಳಪೆಯಾಗಿರುವ ನಗರವೆಂದರೆ ಅದು ಪೋರ್ಚುಗಲ್‌ನ ಲಿಸ್ಬನ್. ಹನ್ನೆರಡು ವಾಲೆಟ್‌ಗಳಲ್ಲಿ ಒಂದನ್ನು ಮಾತ್ರ ಹಿಂತಿರುಗಿಸಲಾಗಿದೆ.