ತಾಲಿಬಾನ್ ಸಹ ಸಂಸ್ಥಾಪಕ ಹಾಗೂ ಅಫ್ಘಾನಿಸ್ತಾನದ ಉಪ ಪ್ರಧಾನಿ ಮುಲ್ಲಾ ಅಬ್ದುಲ್ ಘನಿ ಬರಾದಾರ್ಗೆ ಹಕ್ಕಾನಿ ನೆಟ್ವರ್ಕ್ನ ಪ್ರಮುಖ ನಾಯಕ ಹೊಡೆದಿದ್ದು, ಇದೇ ಕಾರಣಕ್ಕೆ ಕಾಬೂಲ್ನ ಅಧ್ಯಕ್ಷೀಯ ಸ್ಥಳದಲ್ಲಿ ಗುಂಡಿನ ಚಕಮಕಿ ಉಂಟಾಗಿದೆ ಎಂದು ತಿಳಿದುಬಂದಿದೆ.
ತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅಧ್ಯಕ್ಷೀಯ ಅರಮನೆಯಲ್ಲಿ ಸಂಪುಟದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಚರ್ಚೆ ಕಾವೇರುತ್ತಿದ್ದಂತೆಯೇ ಹಕ್ಕಾನಿ ನೆಟ್ವರ್ಕ್ನ ಪ್ರಮುಖ ನಾಯಕ ಖಲಿಲ್ ಉಲ್ ರೆಹಮಾನ್ ಹಕ್ಕಾನಿ ತಮ್ಮ ಖುರ್ಚಿಯಿಂದ ಎದ್ದು ಬರಾದಾರ್ಗೆ ಥಳಿಸಿದ್ದಾರೆ ಎಂದು ಬ್ಲೂಮ್ಬರ್ಗ್ ವರದಿ ಮಾಡಿದೆ.
ಕೆಲವೇ ನಿಮಿಷಗಳಲ್ಲಿ ಎರಡೂ ನೆಟ್ವರ್ಕ್ನ ಅಂಗರಕ್ಷಕರು ಬಂದೂಕನ್ನು ಹೊರತೆಗೆದರು ಹಾಗೂ ಗುಂಡಿನ ಸುರಿಮಳೆಯನ್ನೇ ಶುರುವಿಟ್ಟರು. ಇದು ಕೆಲವರ ಸಾವಿಗೆ ಹಾಗೂ ಗಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಅಧ್ಯಕ್ಷೀಯ ನಿವಾಸದಲ್ಲಿ ಉಂಟಾದ ಈ ಗುಂಡಿನ ಚಕಮಕಿಯಲ್ಲಿ ಬರಾದಾರ್ ಸಾವಿಗೀಡಾಗಿದ್ದಾರೆ ಎಂಬ ವದಂತಿ ವ್ಯಾಪಕವಾಗಿ ಹರಿದಾಡಿತ್ತು.
ಆದರೆ ಈ ಘಟನೆಯಲ್ಲಿ ಬರಾದಾರ್ ಸಾಯುವುದು ಹಾಗಿರಲಿ ಗಾಯಗೊಂಡಿರಲೂ ಇಲ್ಲ. ಇದಾದ ಬಳಿಕ ಅವರು ಕೆಲ ಸಮಯ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಆದರೆ ಬರಾದಾರ್ ಸಾವಿನ ವದಂತಿ ಹೆಚ್ಚುತ್ತಿದ್ದಂತೆಯೇ ತಾಲಿಬಾನ್ ನಾಯಕ ತಾನು ಸತ್ತಿಲ್ಲ ಬದುಕಿದ್ದೇನೆ ಎಂದು ಆಡಿಯೋ ನೋಟ್ ರಿಲೀಸ್ ಮಾಡಿ ಸ್ಪಷ್ಟನೆ ನೀಡಿದ್ದರು.