ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ರ ಮುಂಬೈ ನಿವಾಸದಲ್ಲಿ ಸತತ ಮೂರು ದಿನಗಳ ಕಾಲ ದಾಳಿ ನಡೆಸಿದ ಆದಾಯ ಇಲಾಖೆ ಅಧಿಕಾರಿಗಳು ಸೋನು ಸೂದ್ 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯ ಅರವಿಂದ ಕೇಜ್ರಿವಾಲ್ ಸರ್ಕಾರದ ʼದೇಶ್ ಕಾ ಮೆಂಟರ್ಸ್ʼ ಯೋಜನೆಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆಯಾದ ಬೆನ್ನಲ್ಲೇ ಸೋನು ಸೂದ್ ನಿವಾಸದ ಮೇಲೆ ಈ ಐಟಿ ದಾಳಿ ನಡೆದಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸೋನು ಸೂದ್ ವಿದೇಶಿ ಕೊಡುಗೆ (ನಿಯಂತ್ರಕ) ಕಾಯ್ದೆಯನ್ನು ಉಲ್ಲಂಘಿಸಿ ಸಾಗರೋತ್ತರ ದಾನಿಗಳಿಂದ 2.1 ಕೋಟಿ ರೂಪಾಯಿಗಳನ್ನು ಸೋನು ಸೋದ್ರ ಲಾಭರಹಿತ ಸಂಸ್ಥೆಯು ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ನಟ ಸೋನುಸೂದ್ಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ನಡೆಸಲಾದ ದಾಳಿಯಲ್ಲಿ ಸೋನು ಸೂದ್ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ. ಅಸುರಕ್ಷಿತ ಸಾಲದ ರೂಪದಲ್ಲಿ ಹಣವನ್ನು ಸಾಗಿಸುವ ಮೂಲಕ ನಟ ಸೋನು ಸೂದ್ ತೆರಿಗೆ ವಂಚನೆ ಮಾಡಲು ಯತ್ನಿಸಿದ್ದಾರೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಮಾಹಿತಿ ನೀಡಿದೆ.
ಇದುವರೆಗೆ ದೊರಕಿರುವ ಮಾಹಿತಿಯ ಪ್ರಕಾರ ನಟ ಸೋನು ಸೂದ್ 20 ಕೋಟಿ ರೂಪಾಯಿಗೂ ಅಧಿಕ ತೆರಿಗೆ ವಂಚನೆ ಮಾಡಿರುವುದು ಕಂಡುಬಂದಿದೆ. ತೆರಿಗೆ ತಪ್ಪಿಸುವ ಉದ್ದೇಶದಿಂದ ಸಾಲವನ್ನು ತೋರಿಸಲಾಗಿದೆ. ಹೂಡಿಕೆ ಮಾಡಲು ಹಾಗೂ ಆಸ್ತಿ ಖರೀದಿಸಲು ಈ ನಕಲಿ ಸಾಲಗಳನ್ನು ಬಳಕೆ ಮಾಡಲಾಗಿದೆ ಎಂದು ತೆರಿಗೆ ಇಲಾಖೆ ಹೇಳಿದೆ.