ಭಾರತೀಯ ರೈಲ್ವೆ ಇಲಾಖೆಯಲ್ಲಿ ಹುದ್ದೆಯನ್ನು ಪಡೆಯಬೇಕೆಂದು ಇಚ್ಛಿಸುವವರಿಗೆಂದೇ ರೈಲ್ವೆ ಸಚಿವಾಲಯವು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ಆರಂಭಿಸಿದೆ.
ಭಾರತೀಯ ಕೌಶಲ್ಯ ವಿಕಾಸ ಯೋಜನೆಯ ಅಡಿಯಲ್ಲಿ ರೈಲ್ವೆ ಇಲಾಖೆಯು ಮುಂದಿನ ಮೂರು ವರ್ಷಗಳಲ್ಲಿ ಕನಿಷ್ಟ 50 ಸಾವಿರ ಯುವಕರಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿದೆ.
ಭಾರತೀಯ ರೈಲ್ವೆ ಇಲಾಖೆಯ ಯೋಜನೆಯ ಪ್ರಕಾರ, ಪೈಲಟ್ ಬ್ಯಾಚ್ ದೇಶಾದ್ಯಂತ 1 ಸಾವಿರ ಅಭ್ಯರ್ಥಿಗಳನ್ನು ಹೊಂದಿರಲಿದೆ. ಎಲೆಕ್ಟ್ರಿಷಿಯನ್, ವೆಲ್ಡರ್ , ಫಿಟ್ಟರ್ ಸೇರಿದಂತೆ ಪ್ರಮುಖ ನಾಲ್ಕು ವಿಭಾಗಗಳಲ್ಲಿ ತರಬೇತಿ ನೀಡಲಾಗುತ್ತದೆ.
ಭಾರತೀಯ ರೈಲ್ವೆ ಇಲಾಖೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ನಾಲ್ಕು ರೈಲ್ವೆ ವಲಯಗಳಲ್ಲಿ ಯುವಕರಿಗೆ ತರಬೇತಿ ನೀಡಲಾಗುತ್ತದೆ. ಪ್ರಾಥಮಿಕ ಮೂಲ ತರಬೇತಿಯು 100 ಗಂಟೆಗಳ ಅವಧಿಯನ್ನು ಹೊಂದಿದೆ. ಈ ತರಬೇತಿಯು 70 ಪ್ರತಿಶತ ಪ್ರಾಯೋಗಿಕ ಹಾಗೂ 30 ಪ್ರತಿಶತ ಲಿಖಿತ ರೂಪದಲ್ಲಿ ಇರಲಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಗ್ರಾಮೀಣ ಭಾಗಗಳಲ್ಲಿ ತರಬೇತಿ ನೀಡುವುದೇ ನಮ್ಮ ಮೂಲ ಗುರಿಯಾಗಿದೆ. ಈ ತರಬೇತಿಯ ಮೂಲಕ ಯುವಕರ ಕೌಶಲ್ಯ ಹೆಚ್ಚಲಿದೆ ಎಂಬ ನಂಬಿಕೆಯಿದೆ. ತರಬೇತಿ ಪೂರ್ಣಗೊಳಿಸಿದ ಯುವಕರನ್ನು ಮೌಲ್ಯಮಾಪನಕ್ಕೆ ಒಳಪಡಿಸಲಾಗುತ್ತದೆ. ಇದರಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳು ರಾಷ್ಟ್ರೀಯ ರೈಲು ಹಾಗೂ ಸಾರಿಗೆ ಸಂಸ್ಥೆಯಿಂದ ಪ್ರಮಾಣ ಪತ್ರ ಪಡೆಯುತ್ತಾರೆ ಎಂದು ಹೇಳಿದರು.