ಲಖ್ನೋ: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ.
ಉತ್ತರಪ್ರದೇಶದ ಲಖ್ನೋದಲ್ಲಿ ಇಂದು ನಡೆದ ಜಿಎಸ್ಟಿ ಮಂಡಳಿಯ ಮಹತ್ವದ ಸಭೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಎಲ್ಲಾ ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ಇದರಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಗಿದೆ. ವಾಹನ ಸವಾರರಿಗೆ ಮತ್ತೆ ಜೇಬು ಸುಡಲಿದೆ.
ಆದಾಯ ಕೊರತೆ ಕಾರಣದಿಂದಾಗಿ ರಾಜ್ಯಗಳು ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ತರಲು ವಿರೋಧ ವ್ಯಕ್ತಪಡಿಸಿವೆ. ಭಾರಿ ಏರಿಕೆಯಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಕೆ ಮಾಡಲು ಜಿಎಸ್ಟಿ ವ್ಯಾಪ್ತಿಗೆ ತರಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಇಂದಿನ ಜಿಎಸ್ಟಿ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಕುರಿತು ಕುತೂಹಲ ಮೂಡಿತ್ತು.
ಅಂದ ಹಾಗೇ, ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲ್ ಮತ್ತು ಡೀಸೆಲ್ ತಂದರೆ ಲೀಟರ್ ಗೆ 30 ರೂ.ವರೆಗೂ ಕಡಿಮೆಯಾಗಲಿದೆ ಎನ್ನಲಾಗಿತ್ತು. ಆದರೆ, ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಲಾಗಿದೆ.