ತನ್ನ ಪತಿ ನೀಲಿ ಚಿತ್ರಗಳ ನಿರ್ಮಾಣದಲ್ಲಿದ್ದ ವಿಚಾರ ತಮಗೆ ಗೊತ್ತೇ ಇರಲಿಲ್ಲ ಎಂದು ಮುಂಬಯಿ ಪೊಲೀಸರಿಗೆ ಹೇಳಿಕೆ ಕೊಟ್ಟಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮಾತಿಗೆ ನಟಿ ಹಾಗೂ ಮಾಡೆಲ್ ಶೆರ್ಲಿನ್ ಚೋಪ್ರಾ ಪತಿಕ್ರಿಯಿಸಿದ್ದಾರೆ.
ರಾಜ್ ಕುಂದ್ರಾ ನೀಲಿ ಚಿತ್ರದ ಪ್ರಕರಣದಲ್ಲಿ 1467 ಪುಟಗಳ ಪೂರಕ ಚಾರ್ಜ್ಶೀಟ್ ಸಲ್ಲಿಸಿರುವ ಮುಂಬಯಿ ಪೊಲೀಸ್ಗೆ ಹೇಳಿಕೆ ಕೊಟ್ಟ 43 ಸಾಕ್ಷಿಗಳಲ್ಲಿ ಶಿಲ್ಪಾ ಶೆಟ್ಟಿ ಹಾಗೂ ಶೆರ್ಲಿನ್ ಚೋಪ್ರಾ ಸಹ ಇದ್ದಾರೆ.
ಶಿಲ್ಪಾ ಶೆಟ್ಟಿಯನ್ನು ’ದೀದಿ’ ಎಂದು ಕರೆದು ವಿಡಿಯೋ ಮಾಡಿರುವ ಶೆರ್ಲಿನ್, ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, “ತಮ್ಮ ಪತಿಯ ಅನೈತಿಕ ಚಟುವಟಿಕೆಗಳ ಬಗ್ಗೆ ತಮಗೆ ಗೊತ್ತೇ ಇಲ್ಲವೆಂದು ದೀದಿ ಹೇಳಿಕೊಂಡಿದ್ದಾರೆ. ತನ್ನ ಪತಿಯ ಸ್ಥಿರಾಸ್ಥಿ ಹಾಗೂ ಚರಾಸ್ಥಿಗಳ ಬಗ್ಗೆಯೂ ತಿಳಿದಿಲ್ಲ ಎನ್ನುತ್ತಾರೆ ದೀದಿ. ಈ ಹೇಳಿಕೆ ಎಷ್ಟು ನಿಜ ಎಂದು ನೀವೇ ಅರ್ಥ ಮಾಡಿಕೊಳ್ಳಬಹುದು,” ಎಂದು ವರ್ಕ್ಔಟ್ ಮಾಡುತ್ತಿರುವ ಶೆರ್ಲಿನ್ ತಿಳಿಸಿದ್ದಾರೆ.
ಬಂಧನದ ಭೀತಿಯಿಂದ ಜಾಮೀನಿಗೆ ಮೊರೆ ಹೋದ ನಟಿ
’ಹಾಟ್ಶಾಟ್ಸ್’ ಹೆಸರಿನ ಮೊಬೈಲ್ ಅಪ್ಲಿಕೇಶನ್ ಒಂದಕ್ಕೆ ಕೆಲಸ ಮಾಡಲು ಸತಾಯಿಸಿ ತನ್ನ ಹಿಂದೆ ರಾಜ್ ಕುಂದ್ರಾ ಹಾಗೂ ಆತನ ಸಂಸ್ಥೆಯ ನಿರ್ದೇಶಕ ಇಬ್ಬರೂ ದಂಬಾಲು ಬಿದ್ದಿದ್ದಾಗಿ ಮುಂಬಯಿ ಪೊಲೀಸರಿಗೆ ಶೆರ್ಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದೀಗ ನೇರವಾಗಿ ಶಿಲ್ಪಾ ಶೆಟ್ಟಿ ವಿರುದ್ಧ ತಿರುಗಿಬಿದ್ದು ಜನರ ಗಮನ ಸೆಳೆದಿದ್ದಾರೆ.