ಬೆಂಗಳೂರು: ಕೊರೋನಾ ಕಾರಣದಿಂದ ಸಂಕಷ್ಟದಲ್ಲಿರುವ ಕುಟುಂಬದವರಿಗೆ ತಲಾ 25 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಹೆಚ್.ಡಿ.ಕೆ., ಕಳೆದ ಒಂದೂವರೆ ವರ್ಷದಿಂದ ಕೋವಿಡ್ ಕಾರಣದಿಂದಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವ 55 ಲಕ್ಷ ಜನ ಸಂಕಷ್ಟದಲ್ಲಿದ್ದು, ಕನಿಷ್ಠ ತಲಾ 25 ಸಾವಿರ ರೂಪಾಯಿ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಮಾನ ನಿಲ್ದಾಣ ನಿರ್ಮಾಣ, ಅಮೃತ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನು ಮುಂದೂಡಬೇಕು. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ತೆರಿಗೆ ಹಣವನ್ನು ಬಳಸಿಕೊಂಡು ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.
ಕೊರೋನಾದಿಂದ ಚಾಲಕರು, ಬೀದಿ ವ್ಯಾಪಾರಿಗಳು, ಗಾರ್ಮೆಂಟ್ಸ್ ನೌಕರರು ಸೇರಿದಂತೆ ಅನೇಕ ಸಣ್ಣಪುಟ್ಟ ಕೆಲಸ ಮಾಡುವವರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಚಿಕಿತ್ಸೆಗಾಗಿ ಉಳಿಸಿದ ಹಣ, ಚಿನ್ನ, ಮನೆ ಮಾರಾಟ ಮಾಡಿಕೊಂಡಿದ್ದಾರೆ. ಕೆಲವು ಸಮುದಾಯಗಳಿಗೆ ಘೋಷಿಸಿದ ಪರಿಹಾರ ಪೂರ್ಣಪ್ರಮಾಣದಲ್ಲಿ ದೊರೆತಿಲ್ಲ. ಹೀಗಾಗಿ ಸಂಕಷ್ಟದಲ್ಲಿರುವವರಿಗೆ ತಲಾ 25 ಸಾವಿರ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.