ಮಡಿಕೇರಿ: ಕೊಡಗು ಜಿಲ್ಲೆಯ ಚೆಂಬು ಗ್ರಾಮ ಪಂಚಾಯಿತಿ ರಾಮನಹಳ್ಳಿಯಲ್ಲಿ ಗ್ರಾಪಂ ಸದಸ್ಯೆ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ನಂತರ ಆತನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಬುಧವಾರ ಸಂಜೆ ಮಗಳು ಹಾಗೂ ಸಂಬಂಧಿಕರೊಂದಿಗೆ ಮಹಿಳೆ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಸಂಬಂಧಿಕರೊಬ್ಬರ ಮನೆಗೆ ಹೋಗುತ್ತಿದ್ದ ಅವರನ್ನು ಸೇತುವೆ ಮೇಲೆ ಅಡ್ಡಗಟ್ಟಿದ ಸಂಬಂಧಿಯಾಗಿರುವ ಮುತ್ತಪ್ಪ ಎಂಬಾತ ಜಗಳವಾಡಿದ್ದಾನೆ.
ಜಗಳದ ವೇಳೆ ಮಹಿಳೆಯನ್ನು ಸೇತುವೆಯಿಂದ ನದಿಗೆ ತಳ್ಳಿದ್ದಾನೆ. ಅಲ್ಲದೆ, ತನ್ನ ಕೈಯಲ್ಲಿದ್ದ ಕತ್ತಿಯಿಂದ ಮಹಿಳೆ ಜೊತೆಗಿದ್ದ ಕುಟುಂಬದವರನ್ನು ಬೆದರಿಸಿ ಓಡಿಸಿದ್ದಾನೆ. ಬಳಿಕ ನದಿಯಲ್ಲಿದ್ದ ಮಹಿಳೆಯನ್ನು ಎಳೆದುಕೊಂಡು ಗುಡ್ಡದ ಕಡೆಗೆ ತೆರಳಿದ ಆರೋಪಿ ಆಕೆಯ ಮೇಲೆ ಅತ್ಯಾಚಾರವೆಸಗಿ ಮರಕ್ಕೆ ಸೀರೆಯಿಂದ ನೇಣುಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆನ್ನಲಾಗಿದೆ.
ರಾತ್ರಿಯಾಗಿದ್ದರಿಂದ ಮನೆಯವರು, ಗ್ರಾಮಸ್ಥರು ಹುಡುಕಾಟ ನಡೆಸಿ ಮನೆಗೆ ಮರಳಿದ್ದಾರೆ. ಮುತ್ತಪ್ಪ ಹಾಗೂ ಮಹಿಳೆ ನಡುವೆ ಮೊದಲೇ ಜಗಳವಾಗಿತ್ತು ಎನ್ನಲಾಗಿದೆ. ಗುರುವಾರ ಬೆಳಗ್ಗೆ ಸ್ಥಳೀಯರು ಮತ್ತೆ ಹುಡುಕಾಡಿದಾಗ ಇಬ್ಬರ ಮೃತದೇಹ ಊರಿನಿಂದ ಒಂದೂವರೆ ಕಿಲೋಮೀಟರ್ ದೂರದ ಕಾಡಿನಲ್ಲಿ ಕಂಡುಬಂದಿವೆ. ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.