ನವದೆಹಲಿ: ಬ್ಯಾಂಕಿಂಗ್ ಸುಧಾರಣೆಯ ಬಗ್ಗೆ ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕಳೆದ 6 ವರ್ಷಗಳಲ್ಲಿ 5 ಲಕ್ಷ ಕೋಟಿ ರಿಕವರಿ ಮಾಡಲಾಗಿದೆ. ಭದ್ರತಾ ರಶೀದಿ ಹಿಂತಿರುಗಿಸಲು ನಿನ್ನೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ರಾಷ್ಟ್ರೀಯ ಆಸ್ತಿ ಮರುನಿರ್ಮಾಣ ಕಂಪನಿ ನೀಡುವ ರಸೀದಿ 30,600 ಕೋಟಿ ರೂಪಾಯಿ ವರೆಗೆ ಕೇಂದ್ರ ಸರ್ಕಾರದ ಖಾತರಿ ಅನುಮೋದನೆ ನೀಡಲು ಕೇಂದ್ರ ಸಂಪುಟದಲ್ಲಿ ಈ ಬಗ್ಗೆ ಒಪ್ಪಿಗೆ ನೀಡಲಾಗಿದೆ.
2018ರಲ್ಲಿ ಸಾರ್ವಜನಿಕ ವಲಯದ 21 ಬ್ಯಾಂಕುಗಳ ಪೈಕಿ ಎರಡು ಬ್ಯಾಂಕುಗಳು ಮಾತ್ರ ಲಾಭ ಗಳಿಸಿದ್ದವು. ಆದರೆ 2021 ರಲ್ಲಿ ಕೇವಲ ಎರಡು ಬ್ಯಾಂಕುಗಳು ಮಾತ್ರ ನಷ್ಟ ಅನುಭವಿಸಿವೆ. 2015ರಲ್ಲಿ ಬ್ಯಾಂಕುಗಳ ಆಸ್ತಿ ಗುಣಮಟ್ಟ ಪರಿಶೀಲನೆ ನಡೆದಿದೆ. ಪರಿಶೀಲನೆಯಿಂದ ಬ್ಯಾಂಕುಗಳಲ್ಲಿ ನಷ್ಟಕ್ಕೆ ಕಾರಣ ತಿಳಿಯಿತು. ಅನುತ್ಪಾದಕ ಸಾಲಗಳಿಂದಲೇ ಬ್ಯಾಂಕುಗಳಿಗೆ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.