ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್-ಜೆಡಿಎಸ್ ಸರ್ಕಾರದಲ್ಲಿನ ತಮ್ಮ ಸಂಕಷ್ಟದ ಬಗ್ಗೆ ಮತ್ತೆ ಮೆಲುಕು ಹಾಕುವ ಮೂಲಕ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರು ಪ್ರಧಾನಿಯಾಗಿದ್ದಾಗ ಉಚಿತ ಅಕ್ಕಿ ಕೊಟ್ಟಿದ್ದರು. ಈಗ ಕೆಲವರು ಸರ್ಟಿಫಿಕೇಟ್ ಪಡೆದು ಮಾತನಾಡುತ್ತಿದ್ದಾರೆ. ಮೈತ್ರಿ ಸರ್ಕಾರವಿದ್ದಾಗ ನನಗೆ ತುಂಬಾ ಸಮಸ್ಯೆ ಎದುರಾಗಿತ್ತು. ಸಿದ್ದರಾಮಯ್ಯನವರು 7 ಕೆಜಿ ಪಡಿತರ ಅಕ್ಕಿ ವಿತರಿಸಬೇಕು ಎಂದು ಹೇಳಿದರು. ಆದರೆ 5 ಕೆಜಿ ಅಕ್ಕಿಗೆ ಮಾತ್ರ ಹಣ ನೀಡಿದ್ದರು. ವಸತಿ ನಿರ್ಮಾಣ ಯೋಜನೆ ವಿಚಾರದಲ್ಲಿಯೂ ಹಾಗೇ ಮಾಡಿದರು. 29 ಸಾವಿರ ಕೋಟಿ ರೂಪಾಯಿ ಅಗತ್ಯವಿತ್ತು. ಆಗ ನಾನು ಆ ಹಣವನ್ನು ಎಲ್ಲಿಂದ ತರಬೇಕಿತ್ತು? ಸಾಲ ಮಾಡಿ ಆ ಹಣವನ್ನು ಸರಿದೂಗಿಸಬೇಕಾದರೆ ಕಷ್ಟವಾಯಿತು. ಅದೇ ಸಮಯದಲ್ಲಿ ರೈತರ ಸಾಲ ಮನ್ನಾ ಮಾಡಿ ಎಂದು ಒತ್ತಾಯಗಳು ಕೇಳಿಬಂದವು. ಅಂತಹ ಸಂದರ್ಭದಲ್ಲಿ ಸಾಲ ಮನ್ನಾ ಮಾಡಿ ಅಂದರೆ ಹೇಗೆ ಮಾಡಲು ಸಾಧ್ಯ? ಮೈತ್ರಿ ಸರ್ಕಾರದ ಸಮಯದಲ್ಲಿ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನ ನಡೆಯಿತು ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುಧ್ಧ ಗುಡುಗಿದರು.
ಮುಖದ ಮೇಲಿರುವ ಅನವಶ್ಯಕ ಕೂದಲಿಗೆ ಹೀಗೆ ಹೇಳಿ ʼಗುಡ್ ಬೈʼ
ಇಂದು ಕೊರೊನಾದಿಂದಾಗಿ ಬಡ ಜನರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ದುಸ್ಥಿತಿಯಲ್ಲಿ ಬಡ ಜನರ ನೆರವಿಗೆ ಸರ್ಕಾರ ಧಾವಿಸಬೇಕಿದೆ. ಬಿ.ಎಸ್.ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರೆದಿದ್ದರೆ ಬಡ ಜನರಿಗೆ ಆರ್ಥಿಕ ಪ್ಯಾಕೇಜ್ ಘೋಷಿಸುತ್ತಿದ್ದರು. ಯಡಿಯೂರಪ್ಪನವರಿಗೆ ಬಡವರ ಬಗ್ಗೆ ಕಾಳಜಿಯಿದೆ. ಹಾಗಾಗಿ ಅಧಿವೇಶನ ಮುಗಿಯುವುದರೊಳಗೆ ಸಿಎಂ ಬೊಮ್ಮಾಯಿಗೆ ಹೇಳಿ ಬಡ ಜನರಿಗೆ ಅನುದಾನ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.