ಕಾರು, ಬೈಕು, ಇತರ ಬೃಹತ್ ವಾಹನ ತಯಾರಕರಿಗೆ ಅನುಕೂಲ ಮಾಡಿಕೊಟ್ಟು ಕೊರೊನಾ ಲಾಕ್ ಡೌನ್ ಹೊಡೆತದಿಂದ ಹೊರಕ್ಕೆ ತರಲು ಕೇಂದ್ರ ಸರ್ಕಾರವು ಬುಧವಾರದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿ, ಪ್ರೋತ್ಸಾಹ ಧನ ಘೋಷಿಸಿದೆ.
‘ಉತ್ಪಾದನೆ ಆಧರಿತ ಉತ್ತೇಜನ (ಪ್ರೋತ್ಸಾಹ) ಧನ ಯೋಜನೆ -ಪಿಎಲ್ಐ’ ಅಡಿಯಲ್ಲಿ 26, 058 ಕೋಟಿ ರೂ.ಗಳನ್ನು ಆಟೋಮೊಬೈಲ್, ಡ್ರೋನ್ ತಯಾರಿಕೆ ಕ್ಷೇತ್ರಕ್ಕೆ ನೀಡಲು ಸರ್ಕಾರ ತೀರ್ಮಾನಿಸಿದೆ.
ಐದು ವರ್ಷಗಳ ಅವಧಿಗೆ ಈ ಪ್ರೋತ್ಸಾಹ ಧನವನ್ನು ಕಂಪನಿಗಳಿಗೆ ಹಂಚಲಾಗುವುದು. ಆಟೋಮೊಬೈಲ್ ಬಿಡಿಭಾಗಗಳ ಉತ್ಪಾದನೆಗೂ ಈ ಯೋಜನೆ ನೆರವಾಗಲಿದೆ. ಇದರಿಂದಾಗಿ ಕ್ಷೇತ್ರದಲ್ಲಿ 42,500 ಕೋಟಿ ರೂ. ಹೆಚ್ಚುವರಿ ಬಂಡವಾಳ ಉತ್ಪತ್ತಿಯಾಗುವ ನಿರೀಕ್ಷೆ ಸರ್ಕಾರದ್ದಾಗಿದೆ.
ಸುಮಾರು 7.5 ಲಕ್ಷ ಉದ್ಯೋಗವನ್ನು ಮುಂದಿನ ಐದು ವರ್ಷಗಳಲ್ಲಿ ಆಟೋಮೊಬೈಲ್ ಕ್ಷೇತ್ರವು ದೇಶಾದ್ಯಂತ ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಆಟೋಮೊಬೈಲ್ ಕ್ಷೇತ್ರದ 13 ವಲಯಗಳಿಗೆ ಈ ಯೋಜನೆ ಮೂಲಕ ಹಣಕಾಸು ನೆರವು ಸಿಗಲಿದೆ.
ಬ್ಯಾಟರಿ ಚಾಲಿತ ವಾಹನಗಳು (ಎಲೆಕ್ಟ್ರಿಕ್ ವಾಹನಗಳು), ಹೈಡ್ರೋಜನ್ ಬಳಸುವ ವಾಹನಗಳ ತಯಾರಿಕೆ ಪಿಎಲ್ಐ ಯೋಜನೆ ಅಡಿಯಲ್ಲಿ ಹೆಚ್ಚಿನ ಉತ್ತೇಜನ ಸಿಗಲಿದೆ. ದ್ವಿಚಕ್ರ, ಸಾರ್ವಜನಿಕ ಸಾರಿಗೆ, ಟ್ರ್ಯಾಕ್ಟರ್ಗಳ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ಉತ್ತೇಜನಕ್ಕಾಗಿ ಸರ್ಕಾರವು ಪಿಎಲ್ಐ ಅಡಿಯಲ್ಲೇ 10 ಸಾವಿರ ಕೋಟಿ ರೂ. ಮೀಸಲಿಟ್ಟಿದೆ.