ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಶತಕ ಬಾರಿಸಲೂ ಸಾಧ್ಯವಾಗದೇ ಪರದಾಡುತ್ತಾ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪರವಾಗಿ ವಿಶ್ವಕಪ್ ವಿಜೇತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಬ್ಯಾಟಿಂಗ್ ಮಾಡಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲೂ ತಮ್ಮದೇ ಮಟ್ಟಕ್ಕೆ ತಕ್ಕಂತೆ ಆಡಲು ವಿಫಲರಾದ ಕೊಹ್ಲಿ ಪರವಾಗಿ ಮಾತನಾಡಿದ ಕಪಿಲ್, “ಕೊಹ್ಲಿ ರನ್ ಗಳಿಸುತ್ತಿದ್ದ ವರ್ಷಗಳೆಲ್ಲಾ ನಾಯಕತ್ವದಿಂದ ಆತನ ಬ್ಯಾಟಿಂಗ್ ಮೇಲೆ ಪರಿಣಾಮವಾಗುತ್ತಿದೆ ಎಂದು ಯಾರೊಬ್ಬರೂ ಹೇಳುತ್ತಿರಲಿಲ್ಲ. ಆತನ ಗ್ರಾಫ್‌ನಲ್ಲಿ ಸ್ವಲ್ಪ ಮೇಲೆ ಕೆಳಗೆ ಆಗುತ್ತಲೇ ಎಲ್ಲೆಡೆ ಅಭಿಪ್ರಾಯಗಳು ಕೇಳಿಬರಲು ಆರಂಭಿಸಿವೆ ಎಂದಿದ್ದಾರೆ ಕಪಿಲ್.
ಆತ ಶತಕ, ದ್ವಿಶತಕ ಗಳಿಸಿದಾಗೆಲ್ಲಾ ಆತನ ಮೇಲೆ ಒತ್ತಡ ಇರಲಿಲ್ಲವೇ ? ಆತನ ನಾಯಕತ್ವದ ಮೇಲೆ ಗಮನ ಹರಿಸುವುದಕ್ಕಿಂತ ಆತನ ಸಾಮರ್ಥ್ಯದತ್ತ ಕಣ್ಣು ಹಾಯಿಸಿ ಎಂದಿದ್ದಾರೆ.
ಹಣಕಾಸಿನ ವಿಚಾರಕ್ಕೆ ಗೆಳೆಯನ ಕೊಲೆ….! ಪ್ರಶ್ನಿಸಿದ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಮುಂದಾದ ಆರೋಪಿ
“ಆತನ ಗ್ರಾಫ್ ನಿಜಕ್ಕೂ ಹೆಚ್ಚು-ಕಮ್ಮಿ ಆಗಿದೆ. ಆದರೆ ಎಷ್ಟು ಕಾಲದ ತನಕ ? 28-32ರ ವಯಸ್ಸು ನೀವು ನಿಜಕ್ಕೂ ಅರಳುವ ಕಾಲಘಟ್ಟ. ಈಗ ಆತ ಅನುಭವಿಯಾಗಿದ್ದು ಪ್ರಬುದ್ಧರಾಗಿದ್ದಾರೆ. ಆತ ತನ್ನ ಹಳೆಯ ಲಯಕ್ಕೆ ಮರಳಿದರೆ ವಿರಾಟ್ ಬರೀ ಶತಕ ಅಥವಾ ದ್ವಿಶತಕ ಅಲ್ಲ; ಆತ ನಿಮಗೆ 300 ರನ್ ಗಳಿಸಿ ಕೊಡಬಲ್ಲರು ಎಂದು ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ಆತ ಈಗ ಬಹಳ ಪ್ರಬುದ್ಧರಾಗಿದ್ದು, ಕೊಹ್ಲಿ ವಿಷಯದಲ್ಲಿ ಫಿಟ್ನೆಸ್ ಬಗ್ಗೆ ಪ್ರಶ್ನೆಯೇ ಏಳುವುದಿಲ್ಲ. ಆತ ತನ್ನನ್ನು ತಾನು ಗುರುತಿಸಿಕೊಂಡು ದೊಡ್ಡ ಸ್ಕೋರ್ ಗಳಿಸಬೇಕಿದೆ ಅಷ್ಟೇ ಎಂದು ಕಪಿಲ್ ತಿಳಿಸಿದ್ದಾರೆ.
ಆಧುನಿಕ ಕ್ರಿಕೆಟ್ ಜಗತ್ತಿನ ದಂತಕಥೆಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ, ನವೆಂಬರ್ 2019ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಯಾವುದೇ ಮಾದರಿಯಲ್ಲೂ ಒಂದೇ ಒಂದು ಶತಕ ಗಳಿಸಿಲ್ಲ. 96 ಟೆಸ್ಟ್ ಪಂದ್ಯಗಳಲ್ಲಿ 27 ಶತಕ ಗಳಿಸಿರುವ ವಿರಾಟ್ ಕೊಹ್ಲಿ, ಏಕದಿನ ಪಂದ್ಯಗಳಲ್ಲಿ 43 ಶತಕ ಗಳಿಸಿದ್ದಾರೆ.