ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರತಿಧ್ವನಿಸಿದ್ದು, ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗದ್ದಲ-ಕೋಲಾಹಲ ನಡೆದಿದೆ.
ವಿಧಾನಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಹಿಂದಿನ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿತ್ತು ? ಈಗ ಎಷ್ಟಿದೆ ಎಂಬ ವಿಚಾರವಾಗಿ ವಿಷಯ ಪ್ರಸ್ತಾಪಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನ ಸಾಮಾನ್ಯರು ಕಣ್ಣೀರಲ್ಲಿ ಕೈತೊಳೆಯುವ ಸ್ಥಿತಿ ಬಂದಿದೆ. ಹೀಗಾದರೆ ಜನರು ಜೀವನ ನಡೆಸುವುದಾದರೂ ಹೇಗೆ ? ಎಂಬುದನ್ನು ಸರ್ಕಾರ ವಿವರಿಸಬೇಕು. ಅಗತ್ಯ ವಸ್ತುಗಳ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.
ವಾಜಪೇಯಿ ಕಾಲದಲ್ಲಿಯೇ ಆಯಿಲ್ ಬಾಂಡ್ ಖರೀದಿಸಿದ್ದರು. ಆಗ ಯಾವ ಸರ್ಕಾರವಿತ್ತು ? ಅದನ್ನೇ ಡಾ.ಮನಮೋಹನ್ ಸಿಂಗ್ ಮುಂದುವರೆಸಿಕೊಂಡು ಹೋಗಿದ್ದಾರೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ದರ ಇಷ್ಟು ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಸತ್ಯ ಏನೆಂಬುದನ್ನು ಹೇಳಲು ಅವಕಾಶವನ್ನು ನೀಡಿ ಎಂದು ಸಿದ್ದರಾಮಯ್ಯ ಮಾತು ಮುಂದುವರೆಸಿದರು.
ಡೀಸೆಲ್ ಬೆಲೆ ಹೆಚ್ಚಾದರೆ ಸಾಗಾಣಿಕೆ ವೆಚ್ಚ ಹೆಚ್ಚಾಗುತ್ತದೆ. ಇದರಿಂದ ಉತ್ಪಾದನೆ ಬೆಲೆಯೂ ಹೆಚ್ಚಾಗುತ್ತದೆ. ಅಗತ್ಯವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತದೆ. ಇದರಿಂದ ಸಾಮಾನ್ಯರಿಗೆ ಹೊರೆಯಾಗುವುದಿಲ್ಲವೇ ? ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಆರ್ಥಿಕ ತೊಂದರೆಯಿರುವಾಗ ಬೆಲೆ ಏರಿಕೆ ಮಾಡಿದರೆ ಜನಸಾಮಾನ್ಯರ ಗತಿಯೇನು? ಈ ಬಗ್ಗೆ ಪ್ರಶ್ನೆ ಮಾಡುವುದು ನಮ್ಮ ಕರ್ತವ್ಯ…. ನಾನು ಸಂಸತ್ತಿಗೆ ಹೋಗಿ ಕೇಳಲು ಆಗುವುದಿಲ್ಲ ಇಲ್ಲಿಂದಲೇ ಪ್ರಶ್ನಿಸುತ್ತಿದ್ದೇನೆ. ಸರ್ಕಾರ ಉತ್ತರ ನೀಡಲಿ ಎಂದು ಹೇಳಿದರು.
ಕೂಲಿ ಕಾರ್ಮಿಕನೂ ವರ್ಷಕ್ಕೆ 1 ಲಕ್ಷ ತೆರಿಗೆ ಕಟ್ಟುತ್ತಿದ್ದಾನೆ ಎಂಬುದು ಸರ್ವೆಯಿಂದ ಬಯಲಾಗಿದೆ. ಸಾಮಾನ್ಯರು ಬಸ್ ನಲ್ಲಿ, ಗಾಡಿಯಲ್ಲಿ ಓಡಾಡುವುದು, ಅಗತ್ಯ ವಸ್ತುಗಳ ಖರೀದಿ, ಔಷಧಿ ಖರ್ಚು ನಿಭಾಯಿಸುವುದಾದರು ಹೇಗೆ ? ಎಂದು ಪ್ರಶ್ನಿಸಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಮಾಧುಸ್ವಾಮಿ ಡಾ. ಸಿಂಗ್ ಸರ್ಕಾರದ ಬಗ್ಗೆ ಕಟ್ಟಿಕೊಂಡು ಈಗ ಏನಾಗಬೇಕು ? ಎಂದು ಗುಡುಗಿದರು. ಇದೇ ವೇಳೆ ಮಾತನಾಡಿದ ಸಚಿವ ಡಾ.ಸುಧಾಕರ್, 70 ವರ್ಷಗಳ ಕಾಲ ಕಾಂಗ್ರೆಸ್ ನವರು ಲೂಟಿ ಮಾಡಿದ್ದಾರೆ. ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಕಾಂಗ್ರೆಸ್ ನವರು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಹೇಳುವ ತಾಕತ್ತು ಇದ್ದಾಗ ಕೇಳುವ ತಾಕತ್ತು ಇರಬೇಕು. ರಾಜ್ಯ ಸರ್ಕಾರ ಸಮರ್ಪಕ ಉತ್ತರ ನೀಡಲಿ ಎಂದು ಆಗ್ರಹಿಸಿದರು. ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲು ಸಿಎಂ ಇದ್ದಾರೆ. ಹಾಗಾಗಿ ಸಚಿವ ಸುಧಾಕರ್ ಅವರು ತಮ್ಮ ಸೀಟಿನಲ್ಲಿ ಕುಳಿತುಕೊಳ್ಳಲಿ ಎಂದು ಸಿದ್ದರಾಮಯ್ಯ ಕಿಡಿಕಾರಿದರು. ಈ ವೇಳೆ ಬೆಲೆ ಏರಿಕೆ ವಿಚಾರ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ-ಕೋಲಾಹಲಕ್ಕೆ ಕಾರಣವಾಗುತ್ತಿದ್ದಂತೆ ಸ್ಪೀಕರ್ ಕಾಗೇರಿ ಕಲಾಪವನ್ನು ಮಧ್ಯಾಹ್ನ 2:45ಕ್ಕೆ ಮುಂದೂಡಿದರು.