ನಟಿ ನಿಖಿತಾ ರಾವಲ್ಗೆ ಬಂದೂಕು ಹಿಡಿದು ಬೆದರಿಸಿದ ದರೋಡೆಕೋರರು ಬರೋಬ್ಬರಿ 7 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದಾರೆ. 2008ರಲ್ಲಿ ಅನಿಲ್ ಕಪೂರ್ ಮುಖ್ಯಭೂಮಿಕೆಯ ಬ್ಲಾಕ್ & ವೈಟ್ ಸಿನಿಮಾದಲ್ಲಿ ನಟಿ ನಿಖಿತಾ ರಾವಲ್ ನಟಿಸಿದ್ದಾರೆ.
ದರೋಡೆ ವಿಚಾರವಾಗಿ ಮಾತನಾಡಿದ ನಿಖಿತಾ, ಚಿಕ್ಕಮ್ಮನೊಂದಿಗೆ ನಾನು ಶಾಸ್ತ್ರಿ ನಗರದ ಮನೆಯಲ್ಲಿ ವಾಸವಿದ್ದೆ. ದೆಹಲಿಯಲ್ಲಿ ನನಗೆ ಶೂಟಿಂಗ್ ಶೆಡ್ಯೂಲ್ ಫಿಕ್ಸ್ ಆಗಿತ್ತು. ಮುಖಕ್ಕೆ ಮಾಸ್ಕ್ ಧರಿಸಿದ್ದ ದರೋಡೆಕೋರರು ಮನೆಯ ಸಮೀಪ ನನ್ನನ್ನು ಅಡ್ಡಗಟ್ಟಿ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಧಮ್ಕಿ ಹಾಕಿದರು. ದರೋಡೆಕೋರರು ಬಂದೂಕು ಹಿಡಿದು ಬೆದರಿಸಿದ ಹಿನ್ನೆಲೆಯಲ್ಲಿ ನನ್ನ ಬಳಿಯಿದ್ದ 7 ಲಕ್ಷ ರೂಪಾಯಿಗಳನ್ನು ಅವರಿಗೆ ನೀಡಿದೆ. ಈ ಘಟನೆಯ ಬಳಿಕ ನಾನು ಬದುಕಿದ್ದೇನೆ ಎಂದು ನನಗೆ ನಂಬಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ದರೋಡೆ ನಡೆಯುವ ವೇಳೆ ನಿಖಿತಾರ ಚಿಕ್ಕಮ್ಮ ಕೂಡ ಮನೆಯಲ್ಲಿ ಇರಲಿಲ್ಲ. ತಮ್ಮ ಜೀವವನ್ನು ಉಳಿಸಿಕೊಳ್ಳುವ ಸಲುವಾಗಿ ತಾವು ವಾರ್ಡ್ರೋಬ್ನಲ್ಲಿ ಅವಿತಿದ್ದಾಗಿ ನಿಖಿತಾ ಹೇಳಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ನಿಖಿತಾ ತಮ್ಮ ಚಿಕ್ಕಮ್ಮನ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅತ್ಯಂತ ವೇಗವಾಗಿ ಬಂದ ಟೊಯೋಟಾ ಇನ್ನೋವಾ ಕಾರು ನಿಖಿತಾರ ವಾಹನವನ್ನು ಅಡ್ಡಗಟ್ಟಿದೆ. ಕಾರಿನಿಂದ ಇಳಿದು ಬಂದ ಮುಖವಾಡ ಧರಿಸಿದ್ದ ನಾಲ್ವರು ಬಂದೂಕು ಹಿಡಿದು ಬೆದರಿಕೆ ಹಾಕಿದ್ದರು.
ಇದರಿಂದ ಭಯಗೊಂಡ ನಿಖಿತಾ ತಮ್ಮ ಬಳಿ ಇದ್ದ 7 ಲಕ್ಷ ರೂಪಾಯಿ ನಗದು, ಉಂಗುರ, ಕಿವಿಯೋಲೆ ವಜ್ರದ ಪದಕ, ವಾಚ್ ನೀಡಿದ್ದಾಗಿ ಹೇಳಿದ್ದಾರೆ.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ. ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಹೇಳಿಕೆ ನೀಡುವ ಮೂಲಕ ನಿಖಿತಾ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು. ಈ ಪ್ರಕರಣದಲ್ಲಿ ಅನಗತ್ಯವಾಗಿ ಶಿಲ್ಪಾ ಶೆಟ್ಟಿ ಹೆಸರನ್ನು ಎಳೆಯಲಾಗುತ್ತಿದೆ ಎಂದು ನಿಖಿತಾ ಹೇಳಿದ್ದರು.