ಹಿಂದೂ ಮಹಿಳೆಯ ಜೊತೆಗೆ ಮುಸ್ಲಿಂ ಪುರುಷನ 2ನೇ ವಿವಾಹವು ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಅನೂರ್ಜಿತವಾಗಿದೆ ಎಂದು ಗುವಾಹಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2017ರಲ್ಲಿ ರಸ್ತೆ ಅಪಘಾತದಲ್ಲಿ ಪತಿ ಮೃತಪಟ್ಟ ಬಳಿಕ ಪಿಂಚಣಿ ಸವಲತ್ತನ್ನು ಕೋರಿ ಮೃತ ಸಹಬುದ್ದೀನ್ ಅಹ್ಮದ್ರ 2ನೇ ಪತ್ನಿ ದೀಪಮಣಿ ಕಲಿತಾ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಬಳಿಕ ಕೋರ್ಟ್ ಈ ಆದೇಶ ನೀಡಿದೆ. ದೀಪಮಣಿ 12 ವರ್ಷ ವಯಸ್ಸಿನ ಬಾಲಕನ ತಾಯಿಯಾಗಿದ್ದಾರೆ.
ಮೃತ ಅಹ್ಮದ್, ಕಮರೂಪ್ ಜಿಲ್ಲೆಯಲ್ಲಿ ಉಪ ಆಯುಕ್ತರ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಶೇಷ ವಿವಾಹ ಕಾಯ್ದೆ ಸೆಕ್ಷನ್ 4ನ್ನು ಉಲ್ಲೇಖಿಸಿ ಆದೇಶ ನೀಡಿದ ನ್ಯಾ. ಕಲ್ಯಾಣ್ ರೈ ಸುರಾನಾ, ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಮೃತ ಅಹಮದ್ ಹಾಗೂ ದೀಪಮಣಿ ಮದುವೆ ದಿನಾಂಕ ನೋಂದಣಿಯಾಗಿರುವುದು ಇಲ್ಲಿ ವಿವಾದಾತ್ಮಕ ವಿಚಾರವಲ್ಲ. ಆದರೆ ಅರ್ಜಿದಾರ ಮಹಿಳೆಯ ಪತಿಯ ಮೊದಲ ವಿವಾಹ ಅನೂರ್ಜಿತವಾಗಿರುವ ಬಗ್ಗೆ ಯಾವುದೇ ದಾಖಲೆಗಳು ಇಲ್ಲ ಎಂದು ಹೇಳಿದ್ದಾರೆ.
ಎಂಡಿ ಸಲೀಂ ಅಲಿ ಹಾಗೂ ಶಂಶುದ್ದೀನ್ ಪ್ರಕರಣದಲ್ಲಿ ಸುಪ್ರೀಮ್ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ಗುಹಾವಟಿ ಕೋರ್ಟ್, ಮುಸ್ಲಿಂ ಕಾನೂನು ತತ್ವಗಳ ಪ್ರಕಾರ, ಮುಸ್ಲಿಂ ಹಾಗೂ ಹಿಂದೂ ಧರ್ಮದ ನಡುವಿನ ವಿವಾಹವು ಅನೂರ್ಜಿತವಲ್ಲ. ಆದರೆ ಇದೊಂದು ಸರಿಯಾದ ಕ್ರಮವನ್ನು ಹೊಂದಿರದ ಮದುವೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಅರ್ಜಿದಾರ ಮಹಿಳೆಯು ಮುಸ್ಲಿಂ ಪುರುಷನ ಜೊತೆ ಮೊಹಮ್ಮದೀನ್ ತತ್ವಗಳ ಪ್ರಕಾರ ಮದುವೆಯಾಗಿಲ್ಲ. ಬದಲಾಗಿ ಅವರು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ವಿವಾಹವಾಗಿದ್ದಾರೆ. ಆದರೆ ಈ ಕಾಯ್ದೆಯ ಸೆಕ್ಷನ್ 4ರ ಅಡಿಯಲ್ಲಿ ಈ ವಿವಾಹವು ಅನೂರ್ಜಿತ ಎಂದು ಹೇಳಿದರು.
ಇದು ಮಾತ್ರವಲ್ಲದೇ ಅರ್ಜಿದಾರ ಮಹಿಳೆಯು ಇನ್ನೂ ಹಿಂದೂ ಹೆಸರನ್ನು ಬಳಕೆ ಮಾಡುತ್ತಿದ್ದಾರೆ. ಅರ್ಜಿದಾರ ಮಹಿಳೆ ಇಸ್ಲಾಂ ಧರ್ಮವನ್ನು ಪಾಲಿಸುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಹೀಗಾಗಿ ಸೆಕ್ಷನ್ 4ರ ಅಡಿಯಲ್ಲಿ ಈ ವಿವಾಹವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಹೀಗಾಗಿ ಮಹಿಳೆ ಸಲ್ಲಿಸಿದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಆದರೆ ಅರ್ಜಿದಾರ ಮಹಿಳೆಯ ಅಪ್ರಾಪ್ತ ಬಾಲಕ ಪಿಂಚಣಿ ಸೇರಿದಂತೆ ಇತರೆ ಸೌಕರ್ಯಗಳಿಗೆ ಅರ್ಹನಾಗಿರುತ್ತಾನೆ ಎಂದು ಹೇಳಿದೆ.