ನವದೆಹಲಿ: 24 ವರ್ಷದ ರಾಷ್ಟ್ರೀಯ ಖೋ ಖೋ ಆಟಗಾರ್ತಿಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
24 ವರ್ಷದ ಯುವತಿ ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿಯಾಗಿದ್ದು, ಆಕೆಯ ಮೃತದೇಹ ಬಿಜ್ನೋರ್‌ನ ರೈಲ್ವೇ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಘಟನೆ ನಡೆದ ಸಂದರ್ಭದಲ್ಲಿ ಕರೆ ಮಾಡಿದ್ದ ಸಂತ್ರಸ್ತೆಯ ಸ್ನೇಹಿತ ಹಂಚಿಕೊಂಡ ಆಡಿಯೋ ಕ್ಲಿಪ್ ಸಹಾಯದಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಸೆಪ್ಟೆಂಬರ್ 10 ರಂದು ಮಧ್ಯಾಹ್ನ 2 ಗಂಟೆಗೆ ಯುವತಿ ಉದ್ಯೋಗಕ್ಕಾಗಿ ನಡೆದಿದ್ದ ಸಂದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ರೈಲ್ವೆ ನಿಲ್ದಾಣದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಶಹಜಾದ್ ಅಲಿಯಾಸ್ ಹದೀಮ್ ಅವಳನ್ನು ನೋಡಿ ಸಿಮೆಂಟ್ ರೈಲ್ವೇ ಸ್ಲೀಪರ್‌ಗಳ ಬಳಿ ಎಳೆದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸ್ನೇಹಿತನೊಂದಿಗೆ ಕರೆ ಮಾಡಿ ಮಾತನಾಡುತ್ತಿದ್ದ ಯುವತಿ ಸಹಾಯಕ್ಕಾಗಿ ಕೂಗಲು ಯತ್ನಿಸಿದಾಗ, ಆರೋಪಿ ದುಪಟ್ಟಾ ಮತ್ತು ಹಗ್ಗದಿಂದ ಆಕೆಯ ಕತ್ತು ಬಿಗಿದಿದ್ದಾನೆ. ಆಕೆ ಮೌನವಾಗುವ ಮೊದಲು ಸಹಾಯಕ್ಕಾಗಿ ಕಿರುಚಾಡಿರುವುದನ್ನು ಆಕೆಯ ಸ್ನೇಹಿತ ಕೇಳಿಸಿಕೊಂಡಿದ್ದಾನೆ. ಅದು ಅವನ ಫೋನ್ ನಲ್ಲಿ ರೆಕಾರ್ಡ್ ಆಗಿದೆ.
ಘಟನೆಯ ನಂತರ ಆರೋಪಿ ಮಹಿಳೆಯ ಮೊಬೈಲ್ ನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದು, ಆಕೆಯನ್ನು ಅದೇ ಸಿಮೆಂಟ್ ಸ್ಲೀಪರ್ ನಲ್ಲಿ ಬಿಟ್ಟಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವತಿಯನ್ನು ಸ್ಥಳೀಯರು ಗಮನಿಸಿದ್ದಾರೆ. ಆಕೆ ಮೇಲೆ ಹಲ್ಲೆ ನಡೆಸಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಆರೋಪಿ ಮನೆಗೆ ತಲುಪಿದ ನಂತರ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಅದರ ಕೊನೆಯ ಸ್ಥಳದ ಲೋಕೇಷನ್ ಪತ್ತೆ ಹಚ್ಚಿದ ಪೊಲೀಸರು ಆತನ ನಿವಾಸಕ್ಕೆ ಬಂದು ಆರೋಪಿಯನ್ನು ಬಂಧಿಸಿದ್ದಾರೆ.
ಅಪರಾಧ ನಡೆದ ಸ್ಥಳದಲ್ಲಿ ಆತನ ಚಪ್ಪಲಿ ಮತ್ತು ಆಂಗಿಯ ಎರಡು ಮುರಿದ ಗುಂಡಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ರಕ್ತದ ಕಲೆಗಳಾಗಿದ್ದ ಶರ್ಟ್ ಅನ್ನು ಆತನ ಪತ್ನಿ ತೊಳೆದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಯುವತಿಯ ಸ್ನೇಹಿತನ ಕರೆ ರೆಕಾರ್ಡಿಂಗ್ ಅನ್ನು ಪೊಲೀಸರೊಂದಿಗೆ ಹಂಚಿಕೊಂಡಿದ್ದು, ಆಕೆಯ ಮೇಲೆ ಹಲ್ಲೆ ನಡೆಸಿದಾಗ ಮಹಿಳೆಯ ಕಿರುಚಾಟ ಕೇಳಿ ಬಂದಿತ್ತು. ಈ ಸಾಕ್ಷ್ಯವನ್ನು ಆಧರಿಸಿ, ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಗಳ ಬೆನ್ನಿನ ಮೇಲೆ ಗಾಯದ ಗುರುತುಗಳನ್ನು ಪೊಲೀಸರು ಪತ್ತೆ ಮಾಡಿದ್ದು, ಉಗುರು ಗುರುತುಗಳು ಯುವತಿಯ ಡಿಎನ್ಎಗೆ ಹೊಂದಿಕೆಯಾಗಿದೆಯೇ ಎಂದು ಖಚಿತಪಡಿಸಲು ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಪೊಲೀಸರ ಪ್ರಕಾರ, ಆರೋಪಿಯು ವಿವಾಹಿತನಾಗಿದ್ದು, ಒಬ್ಬ ಮಗಳಿದ್ದಾಳೆ. ಆತ ಮಾದಕ ವ್ಯಸನಿಯಾಗಿದ್ದು, ರೈಲ್ವೆ ನಿಲ್ದಾಣದಿಂದ ವಸ್ತುಗಳನ್ನು ಕದ್ದ ಆರೋಪದ ಮೇಲೆ ಆತನ ವಿರುದ್ಧ ನಾಲ್ಕು ಪ್ರಕರಣಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿವೆ.
ಈ ಪ್ರಕರಣದ ತನಿಖೆಯನ್ನು ಮೊದಲು ರೈಲ್ವೆ ಪೊಲೀಸರು ನಡೆಸುತ್ತಿದ್ದರು. ನಂತರ ಬಿಜ್ನೋರ್ ಪೊಲೀಸರಿಗೆ ವರ್ಗಾಯಿಸಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಧರಮ್‌ವೀರ್ ಸಿಂಗ್ ಅವರು ಮೂರು ದಿನಗಳಲ್ಲಿ ಈ ಪ್ರಕರಣವನ್ನು ಬಯಲಿಗೆಳೆದು ಆರೋಪಿ ಬಂಧಿಸಿದ ತಂಡಕ್ಕೆ 25,000 ರೂ. ಬಹುಮಾನ ಘೋಷಿಸಿದ್ದಾರೆ.