ಬೆಂಗಳೂರು: ಅಪಾರ್ಟ್ ಮೆಂಟ್ ಗಳು, ಹೌಸಿಂಗ್ ಸೊಸೈಟಿ, ಗಣಿಗಾರಿಕಾ ಸಂಸ್ಥೆ, ನೀರು ಪೂರೈಕಾ ಏಜೆನ್ಸಿಗಳು, ಸ್ವಿಮ್ಮಿಂಗ್ ಪೂಲ್ ಗಳು ತಕ್ಷಣ ತಮ್ಮ ಹಳೆ ಹಾಗೂ ಹೊಸ ಬೋರ್ ವೆಲ್ ಸಂಪರ್ಕವನ್ನು ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಕರ್ನಾಟಕ ಅಂತರ್ಜಲ ಪ್ರಾಧಿಕಾರ ಸೂಚನೆ ನೀಡಿದೆ.
ಮಾರ್ಚ್ 31ರೊಳಗಾಗಿ ಬೋರ್ ವೆಲ್ ನೋಂದಣಿ ಮಾಡಿಸಿಕೊಳ್ಳಬೇಕು. ಗಡುವು ಮೀರಿದರೆ 1 ಲಕ್ಷ ರೂಪಾಯಿ ದಂಡ ಕಟ್ಟಬೇಕಾಗುತ್ತದೆ ಅಲ್ಲದೇ ಹೆಚ್ಚುವರಿ ಪರಿಸರ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಅಂತರ್ಜಲ ಮಟ್ಟ ಕುಸಿಯುವುದನ್ನು ತಪ್ಪಿಸಲು ಬಿಬಿಎಂಪಿ ವ್ಯಾಪ್ತಿಯ ನಿವೇಶನಗಳಲ್ಲಿ ಬೋರ್ ವೆಲ್ ಕೊರೆಯಲು ಅನುಮತಿ ನೀಡದಿರಲು ರಾಜ್ಯ ಅಂತರ್ಜಲ ಪ್ರಾಧಿಕಾರ ರಚಿಸಿದ ಪಾಲಿಕೆ ಸಮಿತಿಯಲ್ಲಿ 2019ರಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ನಿವೇಶನಗಳಲ್ಲಿ ಬೋರ್ ವೆಲ್ ಕೊರೆಸಿ ಆ ನೀರನ್ನು ಕಟ್ಟಡ ಕಾಮಗಾರಿಗಳಿಗೆ ಉಪಯೋಗಿಸುತ್ತಿದ್ದುದರಿಂದ ಅಂತರ್ಜಲ ಮಟ್ಟ ಕುಸಿಯುವ ಆತಂಕ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ನಿವೇಶಗಳಲ್ಲಿ ಬೋರ್ ವೆಲ್ ಕೊರೆಯಲು ಅನುಮತಿ ನೀಡದಿರಲು ತೀರ್ಮಾನಿಸಿದ್ದು, ಕಟ್ಟಡ ನಿರ್ಮಾಣಕ್ಕೆ ನೀರು ಬೇಕಾದಲ್ಲಿ ಜಲಮಂಡಳಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಉಪಯೋಗಿಸಬಹುದು ಎಂದು ಸಮಿತಿ ತಿಳಿಸಿತ್ತು.
ಅನಧಿಕೃತ ಬೋರ್ ವೆಲ್ ಕಂಡು ಬಂದಲ್ಲಿ ಕಟ್ಟಡ ಮಾಲೀಕ ಹಾಗೂ ಬೋರ್ ವೆಲ್ ಏಜೆನ್ಸಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪ್ರಾಧಿಕಾರ ತಿಳಿಸಿದೆ.