ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ವರದಾ ನದಿಯಲ್ಲಿ ದೋಣಿ ಮುಳುಗಡೆಯಾದ ಪರಿಣಾಮ ಮೂವರು ಸಾವನ್ನಪ್ಪಿದ್ದು ಕನಿಷ್ಟ 11 ಮಂದಿ ನೀರಿನಲ್ಲಿ ಮುಳುಗಡೆಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳೀಯ ಪೊಲೀಸ್ ತಂಡ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಇಲ್ಲಿಯವರೆಗೆ ಅಪ್ರಾಪ್ತ ಬಾಲಕಿ ಸೇರಿದಂತೆ ಮೂವರ ಮೃತದೇಹವನ್ನು ಹೊರತೆಗೆದಿದೆ ಎಂದು ತಿಳಿದುಬಂದಿದೆ.
ಬೆಳಗ್ಗೆ 10:30ರ ಸುಮಾರಿಗೆ ಹತ್ರಾನಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೂರು ಕುಟುಂಬದ 11 ಮಂದಿಯನ್ನು ಕೂರಿಸಿಕೊಂಡು ಸಾಗುತ್ತಿದ್ದ ದೋಣಿಯು ಮುಳುಗಡೆಯಾಗಿತ್ತು.
ಈ ಪ್ರಕರಣ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಹರಿ ಬಾಲಾಜಿ, ವರದಾ ನದಿಯಲ್ಲಿ ದೋಣಿ ಮುಳುಗಡೆ ಪ್ರಕರಣದಲ್ಲಿ ಈಗಾಗಲೇ ಮೂವರ ಮೃತದೇಹ ಪತ್ತೆಯಾಗಿದೆ. ಈ ಘಟನೆಯು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಮರಾವತಿಯ ಬೆನೋಡಾ ಶಹೀದ್ ಶ್ರೀ ಕ್ಷೇತ್ರ ಜುಂಜ್ನಲ್ಲಿ ನಡೆದಿದೆ. ದೋಣಿಯಲ್ಲಿದ್ದ 11 ಮಂದಿ ಒಂದೇ ಕುಟುಂಬಕ್ಕೆ ಸೇರಿದವರು ಎಂದು ಹೇಳಿದ್ರು.
ದೋಣಿಗೆ ಪ್ರಯಾಣಿಕರ ಭಾರವನ್ನು ತಡೆದುಕೊಳ್ಳಲು ಸಾಧ್ಯವಾಗದೇ ಇರುವುದೇ ಈ ಘಟನೆಗೆ ಕಾರಣ ಎನ್ನಲಾಗಿದೆ. ನದಿಯ ದಡದಲ್ಲಿ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದ ಬಳಿಕ ದೋಣಿಯ ಮೂಲಕ ವಾಪಸ್ ತೆರಳುತ್ತಿದ್ದರು ಎನ್ನಲಾಗಿದೆ.