ರಾಯ್ಪುರ: 179 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಟೇಕ್ ಆಫ್ ಆಗುತ್ತಿದ್ದ ವಿಮಾನವನ್ನು ತಕ್ಷಣವೇ ಕೆಳಗಿಳಿಸಲಾಗಿದೆ. ಈ ಮೂಲಕ ಭಾರಿ ಅನಾಹುತ ತಪ್ಪಿದೆ.
ರಾಯ್ಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 10.05ಕ್ಕೆ ರಾಯ್ಪುರದಿಂದ ದೆಹಲಿಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿಯೊಂದು ಅಪ್ಪಳಿಸಿದೆ. ಹೀಗಾಗಿ ವಿಮಾನ ಟೇಕ್ ಆಫ್ ರದ್ದಾಯಿತು ಎಂದು ರಾಯ್ಪುರ ವಿಮಾನ ನಿಲ್ದಾಣದ ನಿರ್ದೇಶಕ ರಾಕೇಶ್ ರಂಜನ್ ಸಹಾಯ್ ಹೇಳಿದ್ದಾರೆ.
ಘಟನೆ ನಡೆದ ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ವಿಮಾನ ನಿಲ್ದಾಣದ ಸಿಬ್ಬಂದಿ ರನ್ ವೇ ಪರಿಶೀಲಿಸಿದಾಗ ಹಕ್ಕಿಯ ಮೃತದೇಹದ ತುಂಡುಗಳು ಪತ್ತೆಯಾಗಿದೆ ಎಂದು ರಾಕೇಶ್ ಹೇಳಿದ್ದಾರೆ.
ಪ್ರಯಾಣಿಕರಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವೆ ರೇಣುಕಾ ಸಿಂಗ್ ಕೂಡ ಇದ್ದರು. ಅವರು ಕೇಂದ್ರ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳುತ್ತಿದ್ದರು.