ದೆಹಲಿಯ ಸಮೀಪದ ಗ್ರಾಮವೊಂದರಲ್ಲಿ ಸುಮಾರು 7 ತಿಂಗಳ ಹಿಂದೆ ಏಕಾಏಕಿ ಕಾಣೆಯಾಗಿದ್ದ ಯುವತಿ ಪೊಲೀಸ್ ಆಗಿ ಮರಳಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಥೇಟ್ ಸಿನಿಮೀಯ ಕತೆಯನ್ನು ಹೋಲುವ ಈ ಘಟನೆಯು ಸ್ಥಳೀಯರನ್ನು ಆಶ್ಚರ್ಯಕ್ಕೊಳಪಡಿಸಿದೆ.
ಎಂಎ ವ್ಯಾಸಂಗ ಮಾಡುತ್ತಿದ್ದ ಯುವತಿಯು ಜನವರಿ ತಿಂಗಳಲ್ಲಿ ಕಣ್ಮರೆಯಾಗಿದ್ದಳು. ಆಕೆ ಕುಟುಂಬಸ್ಥರು ಗ್ರೇಟರ್ ನೋಯ್ಡಾದ ಯುವಕ ಈಕೆಯನ್ನು ಮೋಸ ಮಾಡಿ ಕರೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿ ದೂರನ್ನೂ ದಾಖಲಿಸಿತ್ತು. ಆದರೆ ಈ ಕತೆಯು ಇದೀಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.
ಪೊಲೀಸರು ಯುವತಿಯನ್ನು ಪತ್ತೆ ಮಾಡುವಲ್ಲಿ ನಿರತರಾಗಿರುವ ನಡುವೆಯೇ ಈಕೆ ತಾನಾಗಿಯೇ ಭಾನುವಾರ ವಾಪಸ್ಸಾಗಿದ್ದಾಳೆ. ಹಾಗೂ ತಾನು ನಾಪತ್ತೆಯಾದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾಳೆ.
ಯುವತಿಯ ಕುಟುಂಬಸ್ಥರು ಆಕೆಗೆ ವಿವಾಹವಾಗುವಂತೆ ಪೀಡಿಸುತ್ತಿದ್ದರು. ಇದು ಯುವತಿಯ ಇಷ್ಟಕ್ಕೆ ವಿರೋಧವಾಗಿತ್ತು. ಏಕೆಂದರೆ ಆಕೆ ಸುಂದರ ವೃತ್ತಿ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಹೊಂದಿದ್ದಳು.
ದೆಹಲಿಗೆ ಪಲಾಯನ ಮಾಡಿದ್ದ ಯುವತಿ ಪರಿಚಯಸ್ಥರೊಂದಿಗೆ ವಾಸಿಸಲು ಆರಂಭಿಸಿದಳು. ಹಾಗೂ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸಿದಳು.
ಈ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಯುವತಿ ಇದೀಗ ದೆಹಲಿ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದಾಳೆ. ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಿರುವ ಯುವತಿ ಇದೀಗ ತಾನು ಮದುವೆಗೆ ಸಿದ್ಧ ಎಂದು ಕುಟುಂಬಸ್ಥರ ಬಳಿ ಹೇಳಿಕೊಂಡಿದ್ದಾಳೆ.