ಬೆಂಗಳೂರು: ಶಿಕ್ಷಕರ ಅರ್ಹತಾ ಪರೀಕ್ಷೆ -ಟಿಇಟಿ ಬರೆದ ಶೇಕಡ 19.51 ರಷ್ಟು ಅಭ್ಯರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ.
ಶಾಲಾ ಶಿಕ್ಷಕರ ಹುದ್ದೆಯ ಅರ್ಹತೆಗಾಗಿ ಆಗಸ್ಟ್ 22 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸಲಾಗಿತ್ತು. 2.31 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ಇವರಲ್ಲಿ 45,074 ಅಭ್ಯರ್ಥಿಗಳು ಮಾತ್ರ ಅರ್ಹತೆ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ಶೇಕಡ 3.93 ರಷ್ಟು ಫಲಿತಾಂಶ ಬಂದಿತ್ತು. ಒಂದರಿಂದ 5ನೇ ತರಗತಿಗೆ ಪಾಠ ಮಾಡುವ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತೆಗೆ ನಡೆದ ಪತ್ರಿಕೆ-1 ಪರೀಕ್ಷೆಯಲ್ಲಿ ಶೇಕಡ 20.34 ಹಾಗೂ 6 ರಿಂದ 8ನೇ ತರಗತಿಗೆ ಪಾಠ ಮಾಡುವ ಹಿರಿಯರ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತೆಗೆ ನಡೆದ ಪತ್ರಿಕೆ-2 ಪರೀಕ್ಷೆಯಲ್ಲಿ ಶೇಕಡ 18.82 ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ.
ಪತ್ರಿಕೆ-2ರಲ್ಲಿ 19,523 ವಿದ್ಯಾರ್ಥಿ ಅಭ್ಯರ್ಥಿಗಳು ಶೇಕಡ 60ರಷ್ಟು ಅಂಕ ಗಳಿಸಿದ್ದಾರೆ. ಪತ್ರಿಕೆ -1 ರಲ್ಲಿ 13,639 ಅಭ್ಯರ್ಥಿಗಳು ಶೇಕಡ 60 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.