ಭಾರತೀಯ ಮದುವೆಗಳಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮದುವೆಗೆ ಮುನ್ನ ಜಾತಕ ನೋಡಲಾಗುತ್ತದೆ. ಅನೇಕ ಕಡೆ ಜಾತಕ ಕೂಡಿ ಬಂದ್ರೆ ಮಾತ್ರ ಮದುವೆ ಮಾಡಲಾಗುತ್ತದೆ. ಮದುವೆಗೂ ಮುನ್ನ ಜಾತಕ ನೋಡಿ, ಬಿಡಿ, ಕೆಲವೊಂದು ವೈದ್ಯಕೀಯ ಪರೀಕ್ಷೆಯ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಸಂಬಂಧದಲ್ಲಿ ಬಿರುಕು ಬಿಡದಿರಲಿ ಎಂಬ ಕಾರಣಕ್ಕೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಯಾವುದೇ ಹಿಂಜರಿಕೆಯಿಲ್ಲದೆ ಈ ಪರೀಕ್ಷೆಗಳನ್ನು ಮಾಡಿಕೊಳ್ಳಬೇಕು.
ಎಚ್ಐವಿ ಪರೀಕ್ಷೆ : ಎಚ್ಐವಿ ಸೋಂಕು ಬಂದರೆ, ಇಬ್ಬರ ಜೀವನವೂ ಹಾಳಾಗುತ್ತದೆ. ಹಾಗಾಗಿ ಮದುವೆಗೂ ಮುನ್ನ ಎಚ್ ಐ ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ. ಯಾವುದೇ ಮುಜುಗರವಿಲ್ಲದೆ ಇದನ್ನು ಮಾಡಿಕೊಳ್ಳಬೇಕು.
ಅಂಡಾಶಯಗಳ ಪರೀಕ್ಷೆ : ಕೆಲವರಿಗೆ ತಡವಾಗಿ ಮದುವೆಯಾಗುತ್ತದೆ. ವಯಸ್ಸು 30 ದಾಟುತ್ತಿದ್ದಂತೆ ಮಹಿಳೆಯರಲ್ಲಿ ಅನೇಕ ಬದಲಾವಣೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಮಹಿಳೆಯರು ಅಂಡಾಶಯವನ್ನು ಪರೀಕ್ಷಿಸಿಕೊಳ್ಳಬೇಕು.
ಬಂಜೆತನ ಪರೀಕ್ಷೆ : ಪುರುಷರಲ್ಲಿ ವೀರ್ಯದ ಸ್ಥಿತಿ ಏನು ಮತ್ತು ವೀರ್ಯಾಣು ಎಣಿಕೆ ಎಷ್ಟು ಎಂದು ತಿಳಿಯುವುದು ಕೂಡ ಬಹಳ ಮುಖ್ಯ. ಇದಕ್ಕಾಗಿ ಬಂಜೆತನ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬಹುದು.
ಆನುವಂಶಿಕ ಪರೀಕ್ಷೆ : ಮದುವೆಗೆ ಮೊದಲು, ಇಬ್ಬರೂ ಆನುವಂಶಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಸಂಗಾತಿಗೆ ಯಾವುದೇ ಆನುವಂಶಿಕ ಕಾಯಿಲೆ ಇದೆಯೇ ಎಂಬುದು ಇದ್ರಿಂದ ಸ್ಪಷ್ಟವಾಗುತ್ತದೆ.
ಎಸ್ ಟಿ ಡಿ ಪರೀಕ್ಷೆ : ಮದುವೆಯಾಗುವ ಮೊದಲು ಇಬ್ಬರೂ ಎಸ್ಟಿಡಿ ಪರೀಕ್ಷೆಯನ್ನು ಮಾಡಬೇಕು. ಆದ್ದರಿಂದ ಮದುವೆಯ ನಂತರ ಇಬ್ಬರೂ ಲೈಂಗಿಕವಾಗಿ ಹರಡುವ ರೋಗಗಳಿಂದ ಸುರಕ್ಷಿತವಾಗಿರಬಹುದು. ಎಸ್ಟಿಡಿ ಅಪಾಯಕಾರಿ ಕಾಯಿಲೆಯಾಗಿದ್ದು, ಇದನ್ನು ತಪ್ಪಿಸುವುದು ಬಹಳ ಮುಖ್ಯ.
ರಕ್ತ ಗುಂಪು ಪರೀಕ್ಷೆ : ಗಂಡ ಮತ್ತು ಹೆಂಡತಿ ಇಬ್ಬರು ರಕ್ತದ ಗುಂಪಿನ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತ ಹೊಂದಾಣಿಕೆಯಾಗದೆ ಹೋದಲ್ಲಿ ಗರ್ಭಾವಸ್ಥೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು.