ಆರ್ಥಿಕ ಬಿಕ್ಕಟ್ಟು, ಹಣದ ಸಮಸ್ಯೆ, ನಿರುದ್ಯೋಗತನದಂತಹ ಸುದ್ದಿಗಳೇ ಹೆಚ್ಚಾಗಿ ಹರಡುತ್ತಿರುವ ಈ ಕಾಲದಲ್ಲಿ ರಾಜಸ್ಥಾನದ ಚಿತ್ತೂರು ಜಿಲ್ಲೆಯ ಸಂವಾಲಿಯಾ ಸೇಠ್ ದೇವಸ್ಥಾನದಲ್ಲಿ ಮಾತ್ರ ಡಾಲರ್, ರೂಪಾಯಿ, ಚಿನ್ನ – ಬೆಳ್ಳಿ ಆಭರಣಗಳ ಮೂಲಕವೇ ಸದ್ದು ಮಾಡುತ್ತಿದೆ.
ಸಂವಾಲಿಯಾಜಿ ದೇವರು ತಮ್ಮ ವ್ಯಾಪಾರಿ ಪಾಲುದಾರ ಎಂದೇ ಅನೇಕ ವ್ಯಾಪಾರಿಗಳು ನಂಬಿಕೊಂಡಿದ್ದಾರೆ. ಹೀಗಾಗಿ ದೊಡ್ಡ ಉದ್ಯಮಿಗಳು ತಮ್ಮ ಸರಕುಗಳನ್ನು ಕಳುಹಿಸುವ ಮುನ್ನ ದೇವಸ್ಥಾನದ ಬಾಗಿಲಿಗೆ ತಲೆಬಾಗಿ ನಮಸ್ಕರಿಸುತ್ತಾರೆ. ತಮಗೆ ಬಂದ ಲಾಭದ ಒಂದು ಭಾಗವನ್ನು ದೇವರಿಗೆ ಅರ್ಪಿಸುತ್ತಾರೆ.
ಪ್ರತಿ ತಿಂಗಳು ಕೃಷ್ಣ ಪಕ್ಷ ಚತುರ್ಥಿಯಂದು ಅಂದರೆ ಅಮವಾಸ್ಯೆಗೆ ಒಂದು ದಿನ ಮುಂಚಿತವಾಗಿ ದೇವಾಲಯದಲ್ಲಿ ದೇಣಿಗೆ ಸಂಗ್ರಹದ ಮಾಹಿತಿ ತೆರೆದಿಡಲಾಗುತ್ತದೆ. ಇಲ್ಲಿ ದೇಣಿಗೆಯ ಅಧಿಕೃತ ಅಂಕಿಅಂಶಗಳ ಘೋಷಣೆ ಮಾಡಲಾಗುತ್ತದೆ. ನಮ್ಮ ತಂಡದಲ್ಲಿ 200 ಮಂದಿ ಸದಸ್ಯರಿದ್ದು ಅವರು ದೇಣಿಗೆ ಲೆಕ್ಕಾಚಾರ ನೋಡಿಕೊಳ್ತಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿದೆ.
ಈ ಬಾರಿ 1 ಕೆಜಿ ಚಿನ್ನದ ಬಿಸ್ಕತ್ತು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳು ಹಾಗೂ 5.48 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಇದೇ ಮೊದಲ ಬಾರಿ 100 ಡೌಲರ್ ಮುಖಬೆಲೆಯ 125 ನೋಟುಗಳೂ ಪತ್ತೆಯಾಗಿವೆ ಎಂದು ಟ್ರಸ್ಟ್ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಕ್ತರು ಶ್ರೀ ಸನ್ವರಿಯಾ ಸೇಠ್ ಮೇಲೆ ಅತಿಯಾದ ನಂಬಿಕೆ ಹೊಂದಿದ್ದಾರೆ. ಅನೇಕ ಭಾಗಗಳಿಂದ ಇಲ್ಲಿಗೆ ಬರುವ ಭಕ್ತರು ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಾರೆ ಎಂದು ದೇವಸ್ಥಾನ ಟ್ರಸ್ಟ್ನ ಆಡಳಿತಾಧಿಕಾರಿ ಕೈಲಾಶ್ ಧದೀಚ್ ಮಾಹಿತಿ ನೀಡಿದ್ರು.
ಇದೇ ವಿಚಾರವಾಗಿ ಮಾತನಾಡಿದ ಸನ್ವಲಿಯಾಜಿ ಮಂದಿರ ಮಂಡಳಿ ಅಧ್ಯಕ್ಷ ಕನಹ್ಯದಾಸ್ ವೈಷ್ಣವ್, ಈ ಮೊದಲು ಕೂಡ ಡಾಲರ್ ಕರೆನ್ಸಿ ಪತ್ತೆಯಾಗಿತ್ತು. ಆದರೆ ಅವು ತುಂಬಾ ಕಡಿಮೆ ಸಂಖ್ಯೆಯಲ್ಲಿತ್ತು. ಆದರೆ ಈ ಬಾರಿ 125 ಡಾಲರ್ ನೋಟುಗಳು ಚಿನ್ನದ ಬಿಸ್ಕಟ್ಗಳ ಜೊತೆ ಪತ್ತೆಯಾಗಿದೆ ಎಂದು ಹೇಳಿದ್ದಾರೆ.