ಓಲಾ ಕಂಪನಿಯು ತಮಿಳುನಾಡಿನಲ್ಲಿ ಕಾರ್ಖಾನೆ ನಿರ್ಮಾಣ ಮಾಡುತ್ತಿದ್ದು ಈ ಕಾರ್ಖಾನೆ ನಿರ್ಮಾಣವಾದ ಬಳಿಕ ಇಲ್ಲಿ ಸಂಪೂರ್ಣ ಮಹಿಳಾ ಉದ್ಯೋಗಿಯೇ ಕೆಲಸ ನಿರ್ವಹಿಸಲಿದ್ದಾರೆ ಎಂದು ಓಲಾ ಅಧ್ಯಕ್ಷ ಹಾಗೂ ಓಲಾ ಗ್ರೂಪ್ ಸಿಇಓ ಭವೀಶ್ ಅಗರ್ವಾಲ್ ಘೋಷಣೆ ಮಾಡಿದ್ದಾರೆ. ಓಲಾದ ಭವಿಷ್ಯದ ಈ ಕಾರ್ಖಾನೆಯು ಮಹಿಳೆಯರ ಅತಿದೊಡ್ಡ ಕಾರ್ಖಾನೆಯಾಗಿರಲಿದೆ. ಆತ್ಮ ನಿರ್ಭರ್ ಭಾರತ್ಕ್ಕೆ ಆತ್ಮನಿರ್ಭರ್ ಸ್ತ್ರೀಯರ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.
500 ಎಕರೆ ವಿಸ್ತೀರ್ಣದಲ್ಲಿ ಈ ಕಾರ್ಖಾನೆ ನಿರ್ಮಾಣವಾಗುತ್ತಿದ್ದು ಇಲ್ಲಿ 10 ಸಾವಿರ ಮಹಿಳೆಯರಿಗೆ ಉದ್ಯೋಗವನ್ನು ಕಲ್ಪಿಸಲಾಗುತ್ತದೆ.
ತಮಿಳುನಾಡಿನಲ್ಲಿ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಕಾರ್ಖಾನೆಯನ್ನು ತೆರೆಯಲು 2400 ಕೋಟಿ ರೂಪಾಯಿ ಹೂಡಿಕೆ ಮಾಡಿರುವುದಾಗಿ ಕಳೆದ ವರ್ಷ ಓಲಾ ಕಂಪನಿಯು ಹೇಳಿತ್ತು.
ಕಂಪನಿಯು ಆರಂಭದ ಹಂತದಲ್ಲಿ 10 ಲಕ್ಷ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಮೇರೆಗೆ ಕಾರ್ಯನಿರ್ವಹಿಸಲಿದೆ. ಹಾಗೂ ಬಳಿಕ ಈ ಉತ್ಪಾದನಾ ಸಾಮರ್ಥ್ಯವನ್ನು 20 ಲಕ್ಷಕ್ಕೆ ಏರಿಕೆ ಮಾಡುವುದಾಗಿ ಕಂಪನಿ ಹೇಳಿತ್ತು. ಬಳಿಕ ವಾರ್ಷಿಕ 1 ಕೋಟಿ ಉತ್ಪಾದನಾ ಸಾಮರ್ಥ್ಯವನ್ನು ಪೂರೈಸುವ ಗುರಿಯನ್ನು ಕಂಪನಿ ಹೊಂದಿದೆ.