ಬೆಂಗಳೂರು: ರಾಜ್ಯದ 9 ಕೇಂದ್ರಗಳು ಸೇರಿ ದೇಶಾದ್ಯಂತ ಇಂದು 2020 – 21 ನೇ ಸಾಲಿನ ನೀಟ್ ಪರೀಕ್ಷೆ ನಡೆಯಲಿದೆ.
ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮೊದಲಾದ ಲಸಿಕೆ ರಿಪೋರ್ಟ್ ಕಡ್ಡಾಯವಾಗಿದೆ. ಸೋಂಕಿನ ಲಕ್ಷಣವಿದ್ದರೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.
ಕೊರೋನಾ ಮಾರ್ಗಸೂಚಿ ಅನುಸರಿಸಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ. ಒಂದು ಬೆಂಚಿನಲ್ಲಿ ಒಬ್ಬ ವಿದ್ಯಾರ್ಥಿ ಕೂರಲು ಅವಕಾಶವಿದ್ದು, ಜಿಗ್ ಜಾಗ್ ಮಾದರಿಯಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಪರೀಕ್ಷಾ ಕೇಂದ್ರದಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುವುದು.ಮಧ್ಯಾಹ್ನ 1 ಗಂಟೆಯವರೆಗೆ ಪರಿಶೀಲನೆ ನಡೆಸಲಿದ್ದು, ಅರ್ಧ ಗಂಟೆ ಮೊದಲೇ ಪರೀಕ್ಷಾ ಕೊಠಡಿಯಲ್ಲಿ ಇರಬೇಕು. ವಿದ್ಯಾರ್ಥಿಗಳು ಪರೀಕ್ಷೆಗೆ ಪೆನ್ ತೆಗೆದುಕೊಂಡು ಹೋಗುವಂತಿಲ್ಲ. ಅಲ್ಲೇ ಕೊಡುವ ಪೆನ್ ನಲ್ಲಿ ಬರೆಯಬೇಕಿದೆ. ಮೊಬೈಲ್ ಸೇರಿ ಇತರೆ ಪರಿಕರ ಕೊಂಡೊಯ್ಯುವಂತಿಲ್ಲ. ಡ್ರೆಸ್ ಕೋಡ್ ಕೂಡ ನಿಗದಿಪಡಿಸಲಾಗಿದೆ. ನೀಟ್ ಪ್ರವೇಶ ಪತ್ರ, ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕಿದೆ.
ರಾಜ್ಯದ ಬೆಂಗಳೂರು, ಬೆಳಗಾವಿ, ಮಂಗಳೂರು, ಮೈಸೂರು, ಉಡುಪಿ, ದಾವಣಗೆರೆ, ಧಾರವಾಡ, ಕಲಬುರಗಿ, ಹುಬ್ಬಳ್ಳಿಯಲ್ಲಿ ನೀಟ್ ಪರೀಕ್ಷೆ ನಡೆಯಲಿದೆ. ವೈದ್ಯ, ದಂತ ವೈದ್ಯ ಸೇರಿದಂತೆ ಇತರೆ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದ್ದು, ರಾಜ್ಯದಲ್ಲಿ 1.19 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.