ಅಹಮದಾಬಾದ್: ಗುಜರಾತ್ ಮುಖ್ಯಮಂತ್ರಿ ವಿಜಯ ರೂಪಾನಿ ರಾಜೀನಾಮೆ ಹಿನ್ನೆಲೆಯಲ್ಲಿ ಗಾಂಧಿನಗರದಲ್ಲಿ ಇಂದು ಬಿಜೆಪಿ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಘೋಷಣೆ ಮಾಡುವ ಸಾಧ್ಯತೆ ಇದೆ.
ಹೊಸ ಮುಖ್ಯಮಂತ್ರಿ ಆಯ್ಕೆಗೆ ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಹ್ಲಾದ ಜೋಶಿ ಅವರನ್ನು ನಿಯೋಜನೆ ಮಾಡಲಾಗಿದೆ. ಇವರಿಬ್ಬರು ಕೇಂದ್ರ ಸಚಿವರನ್ನು ಪಕ್ಷದ ವರಿಷ್ಠರು ನಿಯೋಜಿಸಿದ್ದು, ವಿಜಯ ರೂಪಾನಿ ಸ್ಥಾನಕ್ಕೆ ಹೊಸ ಸಿಎಂ ಆಯ್ಕೆ ಹೊಣೆಯನ್ನು ವಹಿಸಲಾಗಿದೆ.
ವಿಜಯ ರೂಪಾನಿ ದಿಢೀರ್ ರಾಜೀನಾಮೆ ಹಿಂದೆ ಹಲವು ಲೆಕ್ಕಾಚಾರಗಳಿವೆ. ಅವರು ಕೋವಿಡ್ ನಿರ್ವಹಣೆಯಲ್ಲಿ ಸೋತಿದ್ದು, ರಿಮೋಟ್ ಕಂಟ್ರೋಲ್ ಸಿಎಂ ಎಂಬ ಹಣೆಪಟ್ಟಿ ಹೊತ್ತಿದ್ದು ಸೇರಿದಂತೆ ಹಲವು ಕಾರಣಗಳಿಂದ ಅವರನ್ನು ಬದಲಾವಣೆ ಮಾಡಲಾಗಿದೆ.
2022 ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಾಟಿದಾರ್ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಕೇಂದ್ರ ಸಚಿವ ಮನಸುಖ್ ಮಾಂಡವೀಯಾ ಹೆಸರು ಕೂಡ ಸಿಎಂ ಸ್ಥಾನಕ್ಕೆ ಕೇಳಿಬಂದಿದೆ. ಬಹುತೇಕ ಇವತ್ತೇ ಹೊಸ ನಾಯಕನ ಆಯ್ಕೆ ಫೈನಲ್ ಆಗಲಿದೆ. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್ ನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಅಳೆದು ತೂಗಿ ಹೊಸ ನಾಯಕನ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.