ಪತ್ರಕರ್ತೆ ಹಾಗೂ ಆಕೆಯ ಪತಿಯಿದ್ದ ಕಾರಿಗೆ ಡಿಕ್ಕಿ ಹೊಡೆಯಲು ಯತ್ನಿಸಿದ ಇಬ್ಬರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಸೆಕ್ಟರ್ 99ರಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದ್ದು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ. ಅತಿವೇಗದ ಚಾಲನೆ ವಿಚಾರವಾಗಿ ಯುವಕರ ಜೊತೆ ವಾಗ್ವಾದ ಉಂಟಾಗಿತ್ತು. ಇದೇ ಕಾರಣಕ್ಕೆ ಯುವಕರು ಕೊಲೆಗೆ ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ.
ಪತ್ರಕರ್ತೆ ರೀಚಾ ಶರ್ಮಾ ಹಾಗೂ ಆಕೆಯ ಪತಿ ರಾತ್ರಿ 9 ಗಂಟೆಯ ವೇಳೆಗೆ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದರು . ಕಾರಿನಲ್ಲಿ ಆಮ್ರಪಾಲಿ ಸಫೈರ್ ಸೊಸೈಟಿ ಸಮೀಪ ದಂಪತಿ ಬಂದಿದ್ದರು. ಈ ವೇಳೆ ಯುವಕರ ಜೊತೆ ದಂಪತಿ ವೇಗದ ಚಾಲನೆ ವಿಚಾರವಾಗಿ ವಾಗ್ವಾದ ಮಾಡಿದ್ದಾರೆ.
ಇದೇ ಮಾತಿಗೆ ದಂಪತಿಯಿದ್ದ ಕಾರನ್ನು ಹಿಂಬಾಲಿಸಿ ಬಂದ ಇಬ್ಬರು ಯುವಕರು ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾರೆ. ಕಾರಿನಿಂದ ಇಳಿದು ಪತ್ರಕರ್ತೆಯ ಪತಿ ಪ್ರಶ್ನಿಸಲು ಮುಂದಾದಾಗ ಅವರ ಮೇಲೆಯೇ ಕಾರನ್ನು ಹರಿಸಲು ಯತ್ನಿಸಿದ್ದಾರೆ ಎಂದು ಹೆಚ್ಚುವರಿ ಉಪ ಆಯುಕ್ತ ರಣವಿಜಯ್ ಸಿಂಗ್ ಹೇಳಿದ್ದಾರೆ.