ಮುಂಬೈ: ಮಹಾನಗರಿ ಮುಂಬೈ ಪೊಲೀಸರು ಹಾಗೂ ಲಾಲ್ ಬಾಗ್ ಮಂಡಲ್ ನಡುವಿನ ಮಾತುಕತೆಯಿಂದಾಗಿ ವಿಳಂಬವಾದ ನಂತರ ಕೊನೆಗೂ ‘ಲಾಲ್ ಬಗೀಚಾ ರಾಜ’ ಅನಾವರಣಗೊಂಡಿದ್ದು, ಈ ವರ್ಷ ವಿಷ್ಣು ಅವತಾರದಲ್ಲಿದೆ.
ವಿಷ್ಣುವಿನ ಅವತಾರದಲ್ಲಿರುವ ಗಣೇಶ ಮೂರ್ತಿಯ ಎತ್ತರ 4 ಅಡಿಗಳಷ್ಟಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗಣೇಶ ಮೂರ್ತಿಯ ಧಾರ್ಮಿಕ ಪೂಜೆಯು ಬೆಳಗ್ಗೆ 10.30ರಿಂದ ಆರಂಭವಾಗಬೇಕಿತ್ತು. ಮುಂಬೈ ಪೊಲೀಸರು ಹಾಗೂ ಲಾಲ್ ಬಗೀಚಾ ಸಾರ್ವಜನಿಕ ಉತ್ಸವ ಮಂಡಳಿಯ ಪದಾಧಿಕಾರಿಗಳ ನಡುವೆ ನಡೆದ ಚರ್ಚೆಯಿಂದಾಗಿ ವಿಳಂಬವಾಯಿತು. ಹೊರಗಿನಿಂದ ಯಾವುದೇ ಭಕ್ತರು ಲಾಲ್ ಬಗೀಚಾ ರಾಜನ ದರ್ಶನ ಪಡೆಯುವಂತಿಲ್ಲ.
ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವುದನ್ನು ತಡೆಯಲು ಮುಂಬೈ ಪೊಲೀಸರು ಸೆಪ್ಟೆಂಬರ್ 10ರಿಂದ 19ರ ವರೆಗೆ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿದ್ದಾರೆ. ಗಣಪತಿ ಮೂರ್ತಿಯ ಯಾವುದೇ ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ ಹಾಗೂ 5ಕ್ಕಿಂತ ಹೆಚ್ಚಿನ ವ್ಯಕ್ತಿಗಳು ಒಂದೇ ಸ್ಥಳದಲ್ಲಿ ಸೇರುವಂತಿಲ್ಲ ಎಂದು ಮುಂಬೈ ಆಯುಕ್ತರ ಕಚೇರಿ ತಿಳಿಸಿದೆ.
ಈ ವರ್ಷ ಭಕ್ತರು ಆನ್ ಲೈನ್ ನಲ್ಲಿ ಗಣೇಶನ ದರ್ಶನ ಪಡೆಯಬೇಕು ಹಾಗೂ ನಗರದೆಲ್ಲೆಡೆ ಯಾವುದೇ ಗಣೇಶ ಮಂಟಪಗಳಿಗೆ ಭೇಟಿ ನೀಡುವಂತಿಲ್ಲ ಎಂದು ಮುಂಬೈ ಕಮಿಷನರ್ ಕಚೇರಿ ಈ ಆದೇಶ ಹೊರಡಿಸಿದೆ. ಮುಂಬೈ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಈ ನಿಯಮ ಅನ್ವಯವಾಗುತ್ತದೆ.
ಇನ್ನು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಅವರು, ಮನೆಗಳಲ್ಲೇ ಹಬ್ಬ ಆಚರಿಸುವಂತೆ ಜನರನ್ನು ಒತ್ತಾಯಿಸಿದ್ದಾರೆ. “ಮುಂಬೈ ಮೇಯರ್ ಆಗಿರುವ ನಾನು ಮೇರಾ ಘರ್, ಮೇರಾ ಬಪ್ಪಾ (ನನ್ನ ಮನೆ, ನನ್ನ ಗಣೇಶ) ಅನುಸರಿಸುತ್ತಿದ್ದೇನೆ. ನಾನೆಲ್ಲೂ ಹೋಗುವುದಿಲ್ಲ. ಯಾರನ್ನೂ ನಮ್ಮ ಮನೆಗೆ ಕರೆಯುವುದಿಲ್ಲ. ರಾಜ್ಯದಲ್ಲಿ 3ನೇ ಅಲೆ ನಿಗ್ರಹಿಸಲು ಇದು ಮುಖ್ಯವಾಗಿದೆ” ಎಂದು ಅವರು ಹೇಳಿದ್ದಾರೆ.
ಅಂದಹಾಗೆ, ಕೊರೋನಾ 3ನೇ ಅಲೆಯ ಆತಂಕದಿಂದಾಗಿ ಗಣೇಶ ಹಬ್ಬಕ್ಕೆ ಮುಂಚಿತವಾಗೇ ಆಂಧ್ರಪ್ರದೇಶ ಸರ್ಕಾರ ಹಾಗೂ ದೆಹಲಿ ಸರ್ಕಾರವು ಗಣೇಶ ಹಬ್ಬದ ಸಾರ್ವಜನಿಕ ಆಚರಣೆಯನ್ನು ನಿರ್ಬಂಧಿಸಿವೆ.